ಮಧ್ಯಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಕೃತ್ಯ: ಬೆತ್ತಲೆ ಮಾಡಿ ವ್ಯಕ್ತಿಗೆ ಪೈಪ್’ನಿಂದ ಹಲ್ಲೆ!

ಭೋಪಾಲ್:‌ ಮಧ್ಯ ಪ್ರದೇಶದಲ್ಲಿ ಅಮಾನವೀಯ ಘಟನೆ ಮುಂದುವರೆದಿದೆ. ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ, ವ್ಯಕ್ತಿಗೆ ಮಲ ತಿನ್ನಿಸಿ ವಿಕೃತಿ ಮೆರೆದ ಘಟನೆಗೆ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಹೇಯ ಘಟನೆ ನಡೆದಿದೆ.

ಕಳ್ಳತನ ಮಾಡಿದ್ದಾನೆ ಎನ್ನುವ ಆರೋಪದ ಮೇಲೆ ವ್ಯಕ್ತಿಯನ್ನು ಬೆತ್ತಲೆ ಮಾಡಿ, ಆತನ ಮೇಲೆ ಪೈಪ್‌ ನಿಂದ ಹಲ್ಲೆ ಮಾಡಿರುವ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಳ್ಳತನ ಮಾಡಿದ್ದಾನೆ ಎಂದು ವ್ಯಕ್ತಿಯನ್ನು ಎಳೆದು ಆತನ ಬಟ್ಟೆಯನ್ನು ತೆಗೆದು, ಬೆತ್ತಲಾಗಿಸಿ ಗೋಡೆ ಒರಗಿ ಕೂರಿಸಿದ ಗುಂಪು ಆತನ ಮೇಲೆ ಅಮಾನವೀಯವಾಗಿ ದೌರ್ಜನ್ಯವೆಸಗಿದೆ. ಪೈಪ್‌ ಗಳಿಂದ ಆತನ ಮೊಣಕೈ ಹಾಗೂ ದೇಹದ ಇತರ ಭಾಗಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಥಳಿತದ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ.

ಮೋತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಧರಮ್ ಕಾಂತಾ ಪ್ರದೇಶದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.

ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ, ಘಟನೆ ಎಲ್ಲಿ ನಡೆದಿದೆ ಮತ್ತು ವಿಡಿಯೋದಲ್ಲಿ ಕಾಣುತ್ತಿರುವ ಆರೋಪಿಗಳು ಯಾರು ಎಂಬುದನ್ನು ಖಚಿತಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಎಸ್ಪಿ ವಿಕ್ರಮ್ ಸಿಂಗ್ ಕುಶ್ವಾಹ ಹೇಳಿದ್ದಾರೆ.

ಮಧ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಮೂರನೇ ಅಮಾನವೀಯ ಘಟನೆ ಇದಾಗಿದೆ.

ಕೆಲ ದಿನಗಳ ಹಿಂದೆ, ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಕಾರ್ಮಿಕನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ವಿಡಿಯೋ ವೈರಲ್ ಆಗಿತ್ತು, ಈ ಸಂಬಂಧ ಪ್ರವೇಶ್ ಶುಕ್ಲಾ ಎಂಬಾತನನ್ನು ಬಂಧಿಸಲಾಗಿದೆ. ಮಧ್ಯಪ್ರದೇಶ ಸರ್ಕಾರವು ಆರೋಪಿಯ ಮನೆಯನ್ನು ಬುಲ್ಡೋಜರ್ ಮೂಲಕ ಕೆಡವಿದೆ.

ಇನ್ನೊಂದು ಘಟನೆಯಲ್ಲಿ, ಶಿವಪುರಿ ಜಿಲ್ಲೆಯ ವರ್ಖಾಡಿ ಗ್ರಾಮದಲ್ಲಿ ಕೆಲವು ಹುಡುಗಿಯರಿಗೆ ಕಿರುಕುಳ ನೀಡಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಪುರುಷರ ಮೇಲೆ ಹಲ್ಲೆ ನಡೆಸಿ ಅವರನ್ನು ಮಲ ತಿನ್ನುವಂತೆ ಮಾಡಿದ ಘಟನೆ ನಡೆದಿತ್ತು.

Latest Indian news

Popular Stories