ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 12 ನವಜಾತ ಶಿಶುಗಳು ಸೇರಿ 24 ಮಂದಿ ಮೃತ್ಯು

ಮುಂಬೈ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 24 ರೋಗಿಗಳು ಸಾವನ್ನಪ್ಪಿದ್ದು ಮೃತರಲ್ಲಿ 12 ನವಜಾತ ಶಿಶುಗಳೂ ಸೇರಿವೆ.

ಈ ಸಾವುಗಳಿಗೆ ಔಷಧಿ ಮತ್ತು ಸಿಬ್ಬಂದಿ ಕೊರತೆಯೇ ಕಾರಣ ಎಂದು ಆಸ್ಪತ್ರೆಯ ಡೀನ್ ಹೇಳಿದ್ದಾರೆ. ನಾಂದೇಡ್‌ನ ಶಂಕರರಾವ್ ಚವ್ಹಾಣ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. 12 ವಯಸ್ಕ ವ್ಯಕ್ತಿಗಳ ಸಾವಿನ ಕಾರಣಗಳು ವಿಭಿನ್ನವಾಗಿವೆ ಎಂದು ಡೀನ್ ಹೇಳಿದ್ದು ಇವರಲ್ಲಿ ಹಲವರು ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಆರು ಪುರುಷರು ಮತ್ತು ಆರು ಹುಡುಗಿಯರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಡೀನ್ ಹೇಳಿದ್ದಾರೆ. ವಿವಿಧ ಉದ್ಯೋಗಿಗಳನ್ನು ವರ್ಗಾವಣೆ ಮಾಡುತ್ತಿರುವುದರಿಂದ ನಾವು ಸ್ವಲ್ಪ ತೊಂದರೆ ಎದುರಿಸಿದ್ದೇವೆ. ನಾವು ತೃತೀಯ ಆರೈಕೆ ಕೇಂದ್ರ ಮತ್ತು 70 ರಿಂದ 80 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಏಕೈಕ ಸೌಲಭ್ಯವಾಗಿದೆ. ಅದಕ್ಕಾಗಿಯೇ ರೋಗಿಗಳು ನಮ್ಮ ಬಳಿಗೆ ದೂರದೂರುಗಳಿಂದ ಬರುತ್ತಾರೆ. ಕೆಲವೇ ದಿನಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದರು.

ಈ ಘಟನೆ ಬಗ್ಗೆ ಕಿಡಿಕಾರಿರುವ ಪ್ರತಿಪಕ್ಷಗಳು ಮೂರು ಇಂಜಿನ್ ಸರ್ಕಾರ(ಬಿಜೆಪಿ, ಏಕನಾಥ್ ಶಿಂಧೆ ಸೇನೆ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಬಣ) ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಸಿಎಂ ಏಕನಾಥ್ ಶಿಂಧೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

Latest Indian news

Popular Stories