ಮಲೆ ಮಹದೇಶ್ವರ ಬೆಟ್ಟದಲ್ಲಿ ಅಗ್ನಿ ಅವಘಡ: ಲಾಡು ತಯಾರಿಕ ಕೇಂದ್ರದಲ್ಲಿ ಧಗಧಗಿಸಿದ ಬೆಂಕಿ

ಮೈಸೂರು: ಮಹದೇಶ್ವರ ಬೆಟ್ಟದಲ್ಲಿ ಅಗ್ನಿ ಅವಘಡ ಸಂಭವಿಸಿ ಲಾಡು ತಯಾರಿಸುವ ಕೇಂದ್ರದಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ಶುಕ್ರವಾರ ನಡೆಯಿತು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಲಡ್ಡು ತಯಾರಿಸುವ ಓವನ್‌ಗೆ ಸಂಪರ್ಕ ಕಲ್ಪಿಸಿದ್ದ ಅಡುಗೆ ಮನೆಯ ಹೊರಭಾಗದಲ್ಲಿ ಇರಿಸಲಾಗಿದ್ದ ಸಿಲಿಂಡರ್ ಖಾಲಿಯಾಗಿದೆ. ಈ ವೇಳೆ ಸಿಬ್ಬಂದಿ ಸಿಲಿಂಡಲ್ ಬದಲಾಯಿಸಲು ಹೋದಾಗ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿರುವುದು ಕಂಡು ಬಂದಿದೆ. ಲಾಡು ತಯಾರಿಸುವ ಮನೆಯಲ್ಲಿ ಜಿಡ್ಡು ಹಾಗೂ ಎಣ್ಣೆ ಪದಾರ್ಥಗಳು ಇದ್ದ ಕಾರಣ, ಬೆಂಕಿಯ ಕೆನ್ನಾಲಿಗೆ ಇಡೀ ಕೋಣೆಗೆ ಆವರಿಸಿದೆ.

ಈ ವೇಳೆ ಕೆಲ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಇತರರು ಆತಂಕದಿಂದ ಹೊರ ಬಂದಿದ್ದಾರೆ.

ಕೂಡಲೇ ಸ್ಥಳಕ್ಕೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಸರಸ್ವತಿ ಆಗಮಿಸಿ, ಪರಿಶೀಲನೆ ನಡೆಸಿ ಟ್ಯಾಂಕರ್ ನೀರು ಬಳಸಿ ಬೆಂಕಿ ನಂದಿಸುವ ವ್ಯವಸ್ಥೆ ಮಾಡಿದರು.

ಬಳಿಕ ಸಾಲೂರು ಬೃಹನ್ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ನಂತರ ಹನೂರಿನಿಂದ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕುರಿತು ನೌಕರರಿಗೆ ಪ್ರಾತ್ಯಕ್ಷಿಕೆ ನೀಡುವ ಕೆಲಸ ಮಾಡಿದರು.

ಘಟನೆಯಲ್ಲಿ ಲಡ್ಡು ತಯಾರಿಕೆ ಸಾಮಗ್ರಿ, ಪರಿಕರಗಳು ಹಾಗೂ ಗೋಡೆಗಳಿಗೆ ಹಾನಿಯಾಗಿದೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಏತನ್ಮಧ್ಯೆ, ಲಡ್ಡು ತಯಾರಿಕಾ ಘಟಕಕ್ಕೆ ದಟ್ಟವಾದ ಹೊಗೆ ಆವರಿಸಿದ್ದನ್ನು ನೋಡಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದರು ಮತ್ತು ಸುತ್ತಮುತ್ತಲಿನ ಭಕ್ತರು ಭಯಭೀತರಾದರು. ಆದರೆ, ಕೆಲ ಗಂಟೆಗಳ ಬಳಿಕ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ನಿಟ್ಟುಸಿರು ಬಿಟ್ಟು. ಈ ಕುರಿತು ಎಂಎಂ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Latest Indian news

Popular Stories