ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ಸಿಎಂ ಆಗುತ್ತೇನೆ ಎಂದು ಬಯಸಿದರೆ, ಆ ಸ್ಥಾನವನ್ನು ಸಂತೋಷದಿಂದ ಬಿಟ್ಟು ಕೊಡುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ನಮ್ಮ ಪಕ್ಷದ ಹಿರಿಯ ನಾಯಕರು. ಅವರಿಗೆ 50 ವರ್ಷಗಳ ರಾಜಕೀಯ ಅನುಭವವಿದೆ. ಈ ಚುನಾವಣೆಯಲ್ಲಿ ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಕರ್ನಾಟಕ ರಾಜಕೀಯದ ಪ್ರತಿಯೊಂದು ಅಂಶವೂ ಅವರಿಗೆ ತಿಳಿದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಂತಿಮವಾಗಿ ಕಾಂಗ್ರೆಸ್ ಬಹುಮತ ಪಡೆದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಹೈಕಮಾಂಡ್ ನಿರ್ಧಾರ ಎಂದು ಅವರು ತಿಳಿಸಿದ್ದಾರೆ.
ಸಿಎಂ ಅಕಾಂಕ್ಷಿಗಳ ಕುರಿತು ಮಾತನಾಡಿದ ಸಿದ್ದರಾಮಯ್ಯ, ‘ನಾನು ಮತ್ತು ಡಿಕೆ ಶಿವಕುಮಾರ್ ಚೆನ್ನಾಗಿ ಹೊಂದಾಣಿಕೆಯಲ್ಲಿದ್ದೇವೆ. ಅವರು ನನ್ನ ನಡುವೆ ಯಾವುದೇ ಪ್ರಮುಖ ಭಿನ್ನಾಭಿಪ್ರಾಯಗಳಿಲ್ಲ. ಪ್ರಜಾಪ್ರಭುತ್ವದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಆದರೆ ಯಾವುದೂ ಪಕ್ಷದ ಹಿತಾಸಕ್ತಿಗೆ ಧಕ್ಕೆ ತರುವಷ್ಟು ಮಹತ್ವದ್ದಲ್ಲ’ ಎಂದಿದ್ದಾರೆ.
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯು ತಮ್ಮ ಕೊನೆಯ ಚುನಾವಣಾ ಸಮರವಾಗಿದ್ದು, ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಸಿದ್ದರಾಮಯ್ಯ ಮತ್ತೆ ಹೇಳಿದ್ದಾರೆ.