ಈ ಸಲ ಮಂಡ್ಯದಿಂದ ಸ್ಪರ್ಧಿಸೋದು ಯಾರು ?

 

ಮಂಡ್ಯ: 2024ರ ಲೋಕಸಭಾ ಎಲೆಕ್ಷನ್ ಹಿನ್ನೆಲೆಯಲ್ಲಿ ನಿಖಿಲ್ ಬದಲಿಗೆ ಹೆಚ್.ಡಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಭದ್ರಕೋಟೆಯನ್ನು ಮತ್ತೆ ವಶಕ್ಕೆ ಪಡೆಯಲು ಮಾಜಿ ಸಿಎಂ ರಣತಂತ್ರ ಹೆಣೆಯುತ್ತಿದ್ದಾರೆ. ಇದಕ್ಕೆಲ್ಲ ಸಾಕ್ಷಿ ಎಂಬಂತೆ ಹೆಚ್.ಡಿ ಕುಮಾರಸ್ವಾಮಿ ಅವರು, ಮದುವೆ, ನಿಶ್ಚಿತಾರ್ಥ, ದೇವರ ಕಾರ್ಯಗಳ ನೆಪದಲ್ಲಿ ಪದೇ ಪದೆ ಮಂಡ್ಯಕ್ಕೆ ಭೇಟಿ ಕೊಡುತ್ತಿರುವುದು ಕುತೂಹಲ ಮೂಡಿಸಿದೆ.

ಕಳೆದ ಲೋಕಸಭಾ ಎಲೆಕ್ಷನ್ನಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಸ್ಪರ್ಧಿಸಿ, ನಟಿ ಸುಮಲತಾ ವಿರುದ್ಧ ಸೋತಿದ್ದರು. ಹೀಗಾಗಿ ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತೆ ನೆಲೆಯೂರಲು ಶತ ಪ್ರಯತ್ನ ಮಾಡುತ್ತಿದೆ. ಇವೆಲ್ಲದರ ಬೆನ್ನಲ್ಲೇ ಮಂಡ್ಯದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಮನೆಯ ಖಾಸಗಿ ಕಾರ್ಯಕ್ರಮಗಳಿಗೆ ಕುಮಾರಸ್ವಾಮಿ ಹಾಜರಾಗುತ್ತಿದ್ದಾರೆ. ಮಂಡ್ಯ, ನಾಗಮಂಗಲ, ಕೆ.ಆರ್.ಪೇಟೆ, ಮದ್ದೂರು ಸೇರಿದಂತೆ ಜಿಲ್ಲೆಯ ಖಾಸಗಿ ಸಮಾರಂಭಗಳಿಗೆ ಖುದ್ದು ಭೇಟಿ ನೀಡ್ತಿದ್ದಾರೆ. ಈ ಮೂಲಕ ಮುಖಂಡರ ನಡುವೆ ವಿಶ್ವಾಸ ಉಳಿಸಿಕೊಂಡು ಎಲ್ಲಾ ನಾಯಕರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ

ಕಳೆದ ಲೋಕಸಭೆ ಎಲೆಕ್ಷನ್ನ ಸೋಲಿನ ಸೇಡು ತೀರಿಸಿಕೊಳ್ಳಲು ಸ್ಥಳೀಯ ನಾಯಕರು ಮಂಡ್ಯದಿಂದ ಮತ್ತೆ ನಿಖಿಲ್ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಈ ಬಾರಿ ನಿಖಿಲ್ ಸ್ಪರ್ಧೆ ಮಾಡಿ ಸೋತರೆ ಮಗನ ರಾಜಕೀಯ ಭವಿಷ್ಯ ನುಚ್ಚು ನೂರಾಗಲಿದೆ. ಈ ಹಿನ್ನೆಲೆಯಲ್ಲಿ ಸೋಲಿನ ಸೇಡು ತೀರಿಸಿಕೊಳ್ಳಲು ಹೆಚ್.ಡಿ ಕುಮಾರಸ್ವಾಮಿಯವರೇ ಸ್ಪರ್ಧೆ ಮಾಡ್ತಾರೆ ಎಂಬುವುದು ಕೇಳಿ ಬರುತ್ತಿದೆ. ಆದರೆ ಇದೆಲ್ಲ ಎಲಕ್ಷನ್ ಅಖಾಡದಲ್ಲೇ ನಿಖರವಾದ ಉತ್ತರ ಸಿಗಲಿದೆ.

Latest Indian news

Popular Stories