ಮಂಗಳೂರು: ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದ ಹೋಂಸ್ಟೇ ದಾಳಿ ಪ್ರಕರಣದ ವಿಚಾರಣೆ ನಡೆಸಿರುವ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 12 ವರ್ಷಗಳ ಬಳಿಕ ಪದರಕರಣದ ಎಲ್ಲಾ 40 ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
2012ರ ಜುಲೈ 28ರಂದು ಮಂಗಳೂರಿನ ಪಡೀಲ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂಸ್ಟೇಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರೆನ್ನಲಾದವರು ದಾಳಿ ನಡೆಸಿದ್ದರು.
ಬರ್ತ್ ಡೇ ಪಾರ್ಟಿಯಲ್ಲಿ ನೆಪದಲ್ಲಿ ಯುವಕ-ಯುವತಿಯರು ಮೋಜು ಮಸ್ತಿಯಲ್ಲಿ ತೊಡಗಿದ್ದಲ್ಲದೇ ಅಶ್ಲೀಲವಾಗಿ ವರ್ತಿಸುತ್ತಿದ್ದಾರೆಂದು ದಾಳಿ ನಡೆಸಿದವರು ಆರೋಪಿಸಿದ್ದರು.
ಪ್ರಕರಣದ ಬಗ್ಗೆ ತನಿಖೆ ಕೈಗೊಂಡ ಮಂಗಳೂರು ಗ್ರಾಮಾಂತರ ಪೊಲೀಸರು 44 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು.
ಒಟ್ಟು 44 ಆರೋಪಿಗಳ ಪೈಕಿ ಮೂವರು ಮೃತಪಟ್ಟಿದ್ದರು. ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ಸೇರ್ಪಡೆಗೊಂಡಿದ್ದ ಪತ್ರಕರ್ತ ನವೀನ್ ಸೂರಿಂಜೆಯನ್ನು ನ್ಯಾಯಾಲಯ ಈ ಹಿಂದೆಯೇ ಪ್ರಕರಣದಿಂದ ಕೈಬಿಟ್ಟಿತ್ತು. ಆ ಬಳಿಕ ವಿಚಾರಣೆ ನಡೆದು ಪ್ರಕರಣದ ಬಗ್ಗೆ ಸಾಕ್ಷ್ಯಾಧಾರಗಳ ಕೊರತೆಯಿಂದ ಉಳಿದ 40 ಮಂದಿ ಆರೋಪಿಗಳು ದೋಷಮುಕ್ತರಾಗಿದ್ದಾರೆ ಎಂದು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ತ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ತೀರ್ಪು ನೀಡಿದ್ದಾರೆ.
ವಕೀಲರಾದ ಶಂಭುಶರ್ಮಾ, ಕಿಶೋರ್ ಕುಮಾರ್ ಅವರ ತಂಡ ಆರೋಪಿಗಳ ಪರವಾಗಿ ವಾದ ಮಂಡಿಸಿತ್ತು.