ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಐದು ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಇಂಫಾಲ್: ಜನಾಂಗೀಯ ಕಲಹ ಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದಿದ್ದು, ರಾಜಧಾನಿ ಇಂಫಾಲ್‌ನ ನ್ಯೂ ಚೆಕ್ಕೋನ್ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ದುಷ್ಕರ್ಮಿಗಳು ಐದು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಇದು ಮುಖ್ಯವಾಗಿ ಇಂಫಾಲ್ ಪೂರ್ವ ಜಿಲ್ಲೆಯ ಕುಕಿ ಪ್ರದೇಶವಾಗಿದೆ. ಸುಟ್ಟು ಕರಕಲಾದ ಮನೆಗಳು ಕುಕಿ ಮತ್ತು ಮೈಟೈ ಎರಡೂ ಸಮುದಾಯಗಳಿಗೆ ಸೇರಿದವುಗಳಾಗಿವೆ.

ಬೆಂಕಿ ಹರಡುವ ಮುನ್ನ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಈ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ ಹೊರತಾಗಿಯೂ ಈ ಘಟನೆ ನಡೆದಿದೆ. ಘಟನೆ ನಡೆದ ಬಳಿಕ ಜನರು ಜಮಾಯಿಸಿದ್ದಾರೆ ಹಾಗೂ ಈ ಪ್ರದೇಶ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್ ಗಳನ್ನು ಸಿಡಿಸಿ ಜನರನ್ನು ಚದುರಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲರ ಕಣ್ಣುಗಳು ಆಗಸ್ಟ್ 29 ರಂದು ನಡೆಯಲಿರುವ ವಿಧಾನಸಭೆಯ ಅಧಿವೇಶನದತ್ತ ನೆಟ್ಟಿದೆ. ರಾಜ್ಯದ ಪರಿಸ್ಥಿತಿಯ ಬಗ್ಗೆ ಸದನದಲ್ಲಿ ಯಾವುದೇ ಚರ್ಚೆ ನಡೆಯದೇ ಇರಬಹುದು ಎಂದು ಕಾಂಗ್ರೆಸ್ ಹಿರಿಯ ಮತ್ತು ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಹೇಳಿದ್ದಾರೆ.

Latest Indian news

Popular Stories