ಮಣಿಪುರ ಸಿಎಂ ಬಿರೇನ್ ಸಿಂಗ್ ರನ್ನು ತಕ್ಷಣ ಪದಚ್ಯುತಗೊಳಿಸಬೇಕು: ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಆಗ್ರಹ

ನವದೆಹಲಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನೇತೃತ್ವದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಹೀಗಾಗಿ ಅವರನ್ನು ತಕ್ಷಣ ಪದಚ್ಯುತಗೊಳಿಸಬೇಕು ಎಂದು ಶನಿವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಆಗ್ರಹಿಸಿದೆ.

ಸಂಸತ್ ಭವನದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಎಂಟು ಅಂಶಗಳ ಬೇಡಿಕೆಗಳನ್ನು ಮಂಡಿಸಿದ ಮಣಿಪುರ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್, ತಮ್ಮ ಅಭಿಪ್ರಾಯ ಮಂಡಿಸಲು ಹೆಚ್ಚಿನ ಸಮಯಾವಕಾಶ ನೀಡದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ಕಳೆದ 50 ದಿನಗಳಲ್ಲಿ ಮಣಿಪುರದ ಬಗ್ಗೆ ಒಂದೇ ಒಂದು ಮಾತನ್ನೂ ಹೇಳದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಸರ್ವಪಕ್ಷ ಸಭೆ ನಡೆಯಬೇಕಿತ್ತು ಎಂದು ಕಾಂಗ್ರೆಸ್ ಪ್ರತಿನಿಧಿಸಿದ್ದ ಸಿಂಗ್ ಹೇಳಿದ್ದಾರೆ.

ಈ ಸರ್ವಪಕ್ಷ ಸಭೆಯು ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಮತ್ತು ಇಂಫಾಲ್‌ನಲ್ಲಿ ನಡೆದಿದ್ದರೆ ಉತ್ತಮವಾಗಿರುತ್ತಿತ್ತು. ಇದು ಮಣಿಪುರದ ಜನರಿಗೆ ಅವರ ನೋವು ಮತ್ತು ಸಂಕಟ ರಾಷ್ಟ್ರೀಯ ವಿಷಯವಾಗಿದೆ ಎಂಬ ಸ್ಪಷ್ಟ ಸಂದೇಶ ರವಾನಿಸುತ್ತಿತ್ತು” ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.

ಯಾವುದೇ ರಾಜಿ ಮಾಡಿಕೊಳ್ಳದೆ ತಕ್ಷಣವೇ ಎಲ್ಲಾ ಬಂಡಾಯ ಗುಂಪುಗಳನ್ನು ನಿಶ್ಯಸ್ತ್ರಗೊಳಿಸಬೇಕು ಎಂದು ಸಿಂಗ್ ಒತ್ತಾಯಿಸಿದ್ದಾರೆ.

“ರಾಜ್ಯ ಸರ್ಕಾರ ಅತ್ಯಂತ ಅಗತ್ಯವಿರುವಾಗ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಸ್ವತಃ ಮುಖ್ಯಮಂತ್ರಿಗಳು ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಬಿಕ್ಕಟ್ಟನ್ನು ನಿಭಾಯಿಸಲು ತಾವು ವಿಫಲವಾಗಿದ್ದನ್ನು ಎರಡು ಬಾರಿ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಅವರು ಜನರ ಕ್ಷಮೆಯನ್ನೂ ಕೇಳಿದ್ದಾರೆ. ಕೂಡಲೇ ಅವರನ್ನು ಬದಲಾಯಿಸಬೇಕು’ ಎಂದು ಸಿಂಗ್ ಆಗ್ರಹಿಸಿದ್ದಾರೆ.

Latest Indian news

Popular Stories