ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ: ಯುವಕ ಸೇರಿ 3 ಮೃತ್ಯು, 4 ಮಂದಿಗೆ ಗಾಯ

ಗುವಾಹಟಿ: ಮಣಿಪುರದಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿ ಮುಂದುವರೆದಿದ್ದು, ಶುಕ್ರವಾರ 19 ವರ್ಷದ ಯುವಕ ಸೇರಿದಂತೆ ಮೂವರು ಸಾವನ್ನಪ್ಪಿ ನಾಲ್ವರು ಗಾಯಗೊಂಡಿದ್ದಾರೆ.

ಶುಕ್ರವಾರ ಮುಂಜಾನೆ 1.30 ರ ಸುಮಾರಿಗೆ ಮೈತೈ ಬಹುಸಂಖ್ಯಾತ ಬಿಷ್ಣುಪುರ್‌ನ ಅವಾಂಗ್ ಲೈಕೇಯ್ ಮತ್ತು ಕುಕಿ ಬಹುಸಂಖ್ಯಾತ ಚುರಚಂದ್‌ಪುರ ಜಿಲ್ಲೆಗಳ ಕಾಂಗ್ವೈ ನಡುವಿನ ಸ್ಥಳದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಮೂವರು ಚುರಾಚಂದ್‌ಪುರದ ಇಬ್ಬರು ಮತ್ತು ಬಿಷ್ಣುಪುರದ ಒಬ್ಬರು ಸಾವನ್ನಪ್ಪಿದ್ದಾರೆ. ಅಂತೆಯೇ ಚುರಚಂದಪುರ ಮೂಲದ ಮೂವರು ಗಾಯಗೊಂಡಿದ್ದು, ಗಾಯಾಳುಗಳನ್ನು ಚುರಚಂದಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಷ್ಣುಪುರದ ಇಂಫಾಲ-ಚುರಾಚಂದ್‌ಪುರ ಹೆದ್ದಾರಿಯಲ್ಲಿ ಈ ವರ್ಷ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 19 ವರ್ಷದ ಯುವಕ ತಗುಲಿ ಯುವಕ ಸಾವನ್ನಪ್ಪಿದ್ದು, ಅವನ ಹತ್ಯೆಯ ನಂತರ, ನೂರಾರು ಸ್ಥಳೀಯರು, ಹೆಚ್ಚಾಗಿ ಮಹಿಳೆಯರು ಮತ್ತು ಯುವಕರು ಬೀದಿಗಿಳಿದು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಯುವಕ ಓದಿದ ಶಾಲೆಯ ವಿದ್ಯಾರ್ಥಿಗಳೂ ಪ್ರತಿಭಟನೆ ನಡೆಸಿದ್ದು, ಮಧ್ಯಾಹ್ನ ಮತ್ತೆ ಅದೇ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ. 

ಏತನ್ಮಧ್ಯೆ, ಅಪರಿಚಿತ ವ್ಯಕ್ತಿಗಳ ಗುಂಪೊಂದು ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಮತ್ತು ಇನ್ನೊಬ್ಬನ ಮೇಲೆ ಗುಂಡು ಹಾರಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎರಡು-ಮೂರು ದಿನಗಳ ಹಿಂದೆ ಈ ಇಬ್ಬರೂ ಹತ್ಯೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅವರು ಕೊನೆಯದಾಗಿ ಜುಲೈ 4 ರಂದು ಕಾಣಿಸಿಕೊಂಡಿದ್ದರು ಮತ್ತು ಅವರು ಇಂಫಾಲ್ ಕಣಿವೆಯ ಕಾಕ್ಚಿಂಗ್ ಜಿಲ್ಲೆಯವರು ಎನ್ನಲಾಗಿದೆ. 

ಇವರಿಬ್ಬರ ನಾಪತ್ತೆ ಖಂಡಿಸಿ ರಾಜ್ಯ ರಾಜಧಾನಿ ಇಂಫಾಲದ ಹೊರವಲಯದಲ್ಲಿರುವ ಸೆಕ್‌ಮೈಜಿನ್ ಬಜಾರ್ ಸೇತುವೆ ಪ್ರದೇಶದಲ್ಲಿ ಗುರುವಾರ ಸಾವಿರಾರು ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಚುರಾಚಂದ್‌ಪುರದಲ್ಲಿ ಐವರು ಸಿಪಿಐ(ಎಂ) ಸಂಸದರು – ಬಿಕಾಶ್ ರಂಜನ್ ಭಟ್ಟಾಚಾರ್ಯ, ಜಾನ್ ಬ್ರಿಟ್ಟಾಸ್, ಸಂತೋಷ್ ಕುಮಾರ್, ಬಿನಯ್ ವಿಶ್ವಮ್ ಮತ್ತು ಸುಭ್ರಾಯಮ್ – ಶುಕ್ರವಾರ ಎರಡು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದರು. ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯ ಮುಖಂಡರು ಸಂಸದರೊಂದಿಗೆ ಸಂಕ್ಷಿಪ್ತ ಸಂವಾದ ನಡೆಸಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅವರು ಇಂಫಾಲ ಕಣಿವೆಯ ಕೆಲವು ಪರಿಹಾರ ಶಿಬಿರಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ.

ಇನ್ನೊಂದೆಡೆ ಜಿಲ್ಲೆಯ ಕಾಂಗ್ಪೋಕ್ಪಿ ಜಿಲ್ಲೆಯ ಫೈಲೆಂಗ್‌ ಗ್ರಾಮದಲ್ಲಿ ಶಸ್ತ್ರಸಜ್ಜಿತ ಉಗ್ರರು ಗ್ರಾಮಸ್ಥರ ಮೇಲೆ ದಾಳಿ ನಡೆಸಲು ಯತ್ನಿಸಿದರು. ಈ ವೇಳೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ಸಮೀಪದಲ್ಲಿ ಇದ್ದ ಮತ್ತಷ್ಟು ಭದ್ರತಾ ಸಿಬಂದಿ ಘಟನಾ ಸ್ಥಳಕ್ಕೆ ಧಾವಿಸಲು ಮುಂದಾದರು. ಆದರೆ ಭದ್ರತಾ ಪಡೆಗಳು ಕಾರ್ಯಾಚರಣೆ ಸ್ಥಳ ವನ್ನು ತಲುಪದಂತೆ ಸುಮಾರು 1,000- 1,500 ಮಹಿಳೆಯರು ರಸ್ತೆ ತಡೆ ನಡೆಸಿ ದರು. ಆದರೂ ಸ್ಥಳದಲ್ಲಿ ನಿಯೋಜಿತರಾಗಿದ್ದ ಅಸ್ಸಾಂ ರೈಫ‌ಲ್ಸ್‌ ಸಿಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ಮೂಲಗಳು ತಿಳಿಸಿವೆ.

ಸಭೆ ಬಹಿಷ್ಕಾರ
ಮಣಿಪುರ ಪರಿಸ್ಥಿತಿ ಕುರಿತು ಚರ್ಚಿಸಲು ಅವಕಾಶ ನಿರಾಕರಿಸಿದ ಅಧ್ಯಕ್ಷರ ನಡೆಯನ್ನು ಖಂಡಿಸಿ ಗೃಹ ಸಚಿವಾಲಯದ ಸಂಸದೀಯ ಸ್ಥಾಯೀ ಸಮಿತಿಯ ಮೂವರು ಸದಸ್ಯರು ಗುರುವಾರ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಕಾರಾಗೃಹಗಳ ಸುಧಾರಣೆ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಈ ವೇಳೆ “ಮಣಿಪುರದ ಸದ್ಯದ ಪರಿಸ್ಥಿತಿ ಕುರಿತು ಚರ್ಚೆಯಾಗಬೇಕು’ ಎಂದು ಟಿಎಂಸಿಯ ಡೆರೆಕ್‌ ಒಬ್ರಿಯಾನ್‌, ಕಾಂಗ್ರೆಸ್‌ನ ದಿಗ್ವಿಜಯ್‌ ಸಿಂಗ್‌ ಮತ್ತು ಪ್ರದೀಪ್‌ ಭಟ್ಟಾ ಚಾರ್ಯ ಜಂಟಿಯಾಗಿ ಸಲ್ಲಿಸಿದ ಮನ ವಿಗೆ ಸಮಿತಿಯ ಅಧ್ಯಕ್ಷ ಬ್ರಿಜ್‌ಲಾಲ್‌ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಮೂಲಗಳು ತಿಳಿಸಿವೆ.
 
ಶಾಲೆ ಆರಂಭವಾದ ಬೆನ್ನಲ್ಲೇ ಮತ್ತೆ ಭುಗಿಲೆದ್ದ ಹಿಂಸಾಚಾರ
ಮಣಿಪುರದಲ್ಲಿ ಶಾಲೆ ಆರಂಭವಾದ ಬೆನ್ನಲ್ಲೇ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ರಾಜಧಾನಿ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಗುರುವಾರ ಶಾಲೆಯೊಂದರ ಹೊರಗೆ ಅಪರಿಚಿತ ಬಂದೂಕುಧಾರಿಗಳು ಮಹಿಳೆಯ ಮೇಲೆ ಗುಂಡು ಹಾರಿಸಿ, ಹತ್ಯೆಗೈದಿದ್ದಾರೆ. ಲ್ಯಾಂಫೆಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಕ್ವಾಕೀತೇಲ್‌ ಮಾಯೈ ಕೊಯಿಬಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಎರಡು ತಿಂಗಳ ಅನಂತರ 1ರಿಂದ 8ನೇ ತರಗತಿಯ ಶಾಲೆಗಳು ಪುನರಾರಂಭಗೊಂಡ ಮಾರನೆಯ ದಿನವೇ ಈ ಘಟನೆ ಜರುಗಿದೆ. ಅಂತೆಯೇ 1-8 ನೇ ತರಗತಿಗಳಿಗೆ ರಾಜ್ಯದ ಶಾಲೆಗಳು ಬುಧವಾರ ಪುನರಾರಂಭವಾದರೂ, ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಹಾಜರಾತಿ ತುಂಬಾ ಕಡಿಮೆಯಾಗಿದೆ. ನಿರಂತರ ಹಿಂಸಾಚಾರದ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಹೆದರುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. 

ಮೇ 3 ರಂದು ಬಹುಸಂಖ್ಯಾತ ಮೈತಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಕ್ರಮವನ್ನು ವಿರೋಧಿಸಲು ವಿದ್ಯಾರ್ಥಿಗಳ ಸಂಘಟನೆಯು ಆಯೋಜಿಸಿದ್ದ “ಬುಡಕಟ್ಟು ಐಕಮತ್ಯ ಮೆರವಣಿಗೆ” ನಂತರ ಜನಾಂಗೀಯ ಘರ್ಷಣೆಗಳು ಭುಗಿಲೆದ್ದಿದ್ದವು.

Latest Indian news

Popular Stories