ವಿಜಯಪುರ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ವಿಚಾರದಲ್ಲಿ ನಮ್ಮ ಸರ್ಕಾರ ಕೃತ್ಯ ಎಸಗಿದವರ ರಕ್ಷಣೆ ಮಾಡಲ್ಲ ಎಂದು ಸಚಿವ ಎಂ ಬಿ ಪಾಟೀಲ ಹೇಳಿದರು.
ವಿಜಯಪುರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ನಾವು ನಮ್ಮ ಸರ್ಕಾರ ಕೃತ್ಯ ಎಸಗಿದವರ ರಕ್ಷಣೆ ಮಾಡಲ್ಲ. ರಕ್ಷಣೆ ಮಾಡುವ ಪ್ರಶ್ನೇಯೆ ಇಲ್ಲ. ಕಾನೂನು ಪ್ರಕಾರ ಕಠಿಣ ಕ್ರಮ ಜರಗಿಸುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಆಗದಂತೆ ಎಚ್ಚರಿಕೆ ವಹಿಸುತ್ತೇವೆ. ಎನ್.ಐ.ಎ ತನಿಖೆ ನಡೆಸುತ್ತಿದೆ. ನಮ್ಮ ರಾಜ್ಯ ಶಾಂತಿಗೆ ಹೆಸರಾಗಿದೆ. ಅದು ಯಾರೆ ಇರಲಿ, ಎಂಥವರೆ ಇರಲಿ ಕಠಿಣ ಕ್ರಮ ಪಕ್ಕಾ ಎಂದರು.
ಇನ್ನು ಮುಸ್ಲಿಂ ಓಲೈಕೆಯಿಂದ ಈ ಕೃತ್ಯ ಎಂಬ ಸಿಟಿ ರವಿ ಹೇಳಿಕೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದು ತಪ್ಪು. ಪುಲ್ವಾಮಾ, ಬಾಲಾಜೋಟ ಪ್ರಕರಣ ಆದಾಗ ನಿಮ್ಮ ಇಂಟಲಿಜೆನ್ಸ್ ಎಲ್ಲಿ ಹೋಗಿತ್ತು. ಇದರಲ್ಲಿ ರಾಜಕಾರಣ ಸರಿಯಲ್ಲ ಎಂದರು.
ಇನ್ನು ಪಾಕಿಸ್ತಾನ ಪರ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿ, ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಸಹಿಸಿಕೊಳ್ಳುವಂತದ್ದಲ್ಲ. ಎಫ್.ಎಸ್.ಎಲ್ ವರದಿ ಬಂದ ಬಳಿಕ ಕಠಿಣ ಕ್ರಮ ತಗೆದುಕೊಳ್ಳುತ್ತೇವೆ. ಯಾರು ಇದನ್ನ ಸಹಿಸಿಕೊಳ್ಳುವುದಿಲ್ಲ. ನಮ್ಮಲ್ಲಿ ನಿಂತು ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಸಹಿಸಿಕೊಳ್ಳಲ್ಲ ಎಂದರು.
ಇನ್ನು ಬ್ರ್ಯಾಂಡ್ ಬೆಂಗಳೂರು ಬಾಂಬ್ ಬೆಂಗಳೂರು ಮಾಡಬೇಡಿ ಎಂಬ ಆರ್ ಅಶೋಕ ಹೇಳಿಕೆಗೆ ಹರಿಹಾಯ್ದ ಎಂ ಬಿ ಪಾಟೀಲ್, ಬ್ರ್ಯಾಂಡ್ ಬೆಂಗಳೂರನ್ನ ಬಾಂಬ್ ಬೆಂಗಳೂರು ಎಂದಿದ್ದೆ ತಪ್ಪು. ಅಶೋಕ ಮಾತನಾಡಿದ್ದು ತಪ್ಪು. ಬಾಂಬ್ ಬೆಂಗಳೂರು ಶಬ್ಧಪ್ರಯೋಗವೇ ತಪ್ಪು ಎಂದರು.
ಇನ್ನು ಜಾತಿಗಣತಿ ವರದಿ ಸಲ್ಲಿಕೆ ಮಾತ್ರ ಆಗಿದೆ. ಅದರಲ್ಲಿ ಏನಿದೆ ಯಾರಿಗೂ ಗೊತ್ತಿಲ್ಲ. ಅದನ್ನು ಮೊದಲು ನೋಡೋಣ. ವರದಿ ನೋಡುವ ಮುಂಚೆಯೇ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಬೇರೆಯವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸಲ್ಲ ಎಂದರು.