ಹೈದರಾಬಾದ್: ತೆಲಂಗಾಣದ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಎಪಿ ಜಿತೇಂದರ್ ರೆಡ್ಡಿ ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಸೇರ್ಪಡೆಗೊಂಡ ರೆಡ್ಡಿ ಅವರನ್ನು ತೆಲಂಗಾಣ ಸರ್ಕಾರದ ಸಲಹೆಗಾರರಾಗಿ ನೇಮಕಗೊಳಿಸಿದ್ದಾರೆ ಎನ್ನಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾದ ಒಂದು ದಿನದ ನಂತರ ಈ ಹೊಸ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.
ಕಾಂಗ್ರೆಸ್ ಸೇರ್ಪಡೆಗೊಂಡ ಕುರಿತು ಜಿತೇಂದರ್ ರೆಡ್ಡಿ ಅವರು ತಮ್ಮ ‘X’ ಖಾತೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ತೆಲಂಗಾಣ ಉಸ್ತುವಾರಿ ದೀಪಾ ದಾಸ್ ಮುನ್ಶಿ ಮತ್ತು ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಹಬೂಬ್‌ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡದ ಕಾರಣ ಅಸಮಾಧಾನಗೊಂಡ ಜಿತೇಂದರ್ ರೆಡ್ಡಿ ಬದಲಿಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಡಿ.ಕೆ.ಅರುಣಾ ಅವರನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದ ಜಿತೇಂದರ್ ರೆಡ್ಡಿ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ “ಹೊರಗಿನವರಿಗೆ ಆದ್ಯತೆ” ನೀಡಿದ ವಿಚಾರದಲ್ಲಿ ಪಕ್ಷದಿಂದ ದೂರವಿರಲು ನಿರ್ಧರಿಸಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.