ನಾಗಾಲ್ಯಾಂಡ್ ನಾಗರಿಕರ ಹತ್ಯೆ: 30 ಸೈನಿಕರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನಿರಾಕರಿಸಿದ ಕೇಂದ್ರ

ನವದೆಹಲಿ: 2021 ರಲ್ಲಿ ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ ನಡೆದ ನಾಗರಿಕರ ಹತ್ಯೆಗೆ ಸಂಬಂಧಿಸಿದಂತೆ ಭಾರತೀಯ ಸೇನೆಯ 30 ಯೋಧರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ರಕ್ಷಣಾ ಸಚಿವಾಲಯ ನಿರಾಕರಿಸಿದೆ ಎಂದು ನಾಗಾಲ್ಯಾಂಡ್ ಪೊಲೀಸರು ಗುರುವಾರ ತಿಳಿಸಿದ್ದಾರೆ.

“ಸಕ್ಷಮ ಪ್ರಾಧಿಕಾರವು(ಮಿಲಿಟರಿ ವ್ಯವಹಾರಗಳ ಇಲಾಖೆ, ರಕ್ಷಣಾ ಸಚಿವಾಲಯ, ಭಾರತ ಸರ್ಕಾರ) ಎಲ್ಲಾ 30 ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ನಿರಾಕರಿಸಿದೆ” ಎಂದು ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಹೇಳಿಕೆಯನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿದೆ.

“ಕಾನೂನಿನ ಪ್ರಕಾರ, ಪ್ರಾಸಿಕ್ಯೂಷನ್ ಗೆ ಅನುಮತಿ ನಿರಾಕರಿಸಿರುವ ವಿಚಾರವನ್ನು ರಾಜ್ಯ ಅಪರಾಧ ಕೋಶ ಪೊಲೀಸ್ ಠಾಣೆ ಮತ್ತು ಎಸ್‌ಐಟಿ ಸೋಮವಾರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯಕ್ಕೆ ತಿಳಿಸಿದೆ” ಎಂದು ವರದಿ ಹೇಳಿದೆ.

ಈ ಸುದ್ದಿಗೆ ಪ್ರತಿಕ್ರಿಯಿಸಿದ ನಾಗಾ ಪೀಪಲ್ಸ್ ಮೂವ್‌ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸೆಕ್ರೆಟರಿ ಜನರಲ್ ನಿಂಗುಲೋ ಕ್ರೋಮ್ ಅವರು, “ಕಳೆದ 50-60 ವರ್ಷಗಳಲ್ಲಿ, ನಮ್ಮ ಜನರ ಮೇಲೆ ಅವರು ಮಾಡಿದ ದೌರ್ಜನ್ಯಕ್ಕಾಗಿ ಇದುವರೆಗೂ ಯಾವುದೇ ಮಿಲಿಟರಿ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ, ರಾಜ್ಯ ಪೊಲೀಸರು ಕೇಂದ್ರದಿಂದ ಪ್ರಾಸಿಕ್ಯೂಷನ್‌ಗೆ ಅಗತ್ಯವಾದ ಅನುಮತಿ ಪಡೆಯದ ಕಾರಣ 30 ಆರೋಪಿ ಸೇನಾ ಸಿಬ್ಬಂದಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.

Latest Indian news

Popular Stories