ಚಂದ್ರನ ಮೇಲೆ ‘ವಿಕ್ರಮ’ಸಾಧನೆ ತೋರಿದ ನಿಮ್ಮ ಪರಿಶ್ರಮಕ್ಕೆ ನನ್ನ ದೊಡ್ಡ ಸೆಲ್ಯೂಟ್: ಇಸ್ರೊ ವಿಜ್ಞಾನಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ ಪ್ರಧಾನಿ ಮೋದಿ

ಬೆಂಗಳೂರು: ಚಂದ್ರಯಾನ-3 ಮಿಷನ್ ಯಶಸ್ಸು ಭಾರತ ಸೇರಿದಂತೆ ಇಡೀ ವಿಶ್ವದ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದು, ಇಸ್ರೊ ವಿಜ್ಞಾನಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ, ಇಸ್ರೊ ವಿಜ್ಞಾನಿಗಳ ಪರಿಶ್ರಮಕ್ಕೆ, ಸಮರ್ಪಣಾ ಮನೋಭಾವಕ್ಕೆ ನನ್ನದೊಂದು ದೊಡ್ಡ ಸೆಲ್ಯೂಟ್. ವಿಜ್ಞಾನಿಗಳ ಈ ಸಾಧನೆಯಿಂದ ನಾನು ಬಹಳ ಖುಷಿಯಾಗಿದ್ದೇನೆ, ಇಂದು ಇಡೀ ದೇಶವೇ ಹೆಮ್ಮೆಪಡುವಂತೆ ನೀವು ಮಾಡಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಇಂದು ಬೆಳಗ್ಗೆ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೊ ಕಮಾಂಡೊ ಕೇಂದ್ರಕ್ಕೆ ಭೇಟಿ ನೀಡಿ ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್ ಸೇರಿದಂತೆ ಇಡೀ ಇಸ್ರೊ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಬಳಿಕ ಅವರನ್ನುದ್ದೇಶಿಸಿ ಮಾತನಾಡಿದರು.
ನಿಮ್ಮನ್ನೆಲ್ಲಾ ಇಂದು ಭೇಟಿ ಮಾಡಿದ್ದು ನನಗೆ ಬಹಳ ಸಂತೋಷವಾಗಿದೆ. ಭಾರತದ ವಿಜ್ಞಾನ ಸಾಧನೆಯನ್ನು ಇಂದು ಇಡೀ ದೇಶ ಕೊಂಡಾಡುತ್ತಿದೆ. ನನ್ನ ತನು-ಮನ ಸಂತೋಷದಿಂದ ಉಕ್ಕುತ್ತಿದೆ. ದೇಶದ ಘನತೆಯನ್ನು ಉತ್ತುಂಗಕ್ಕೆ ಏರಿಸಿದ ನಿಮಗೆಲ್ಲರಿಗೂ ನನ್ನ ಧನ್ಯವಾದಗಳು ಎಂದರು.
ಇದಕ್ಕೂ ಮುನ್ನ ಇಸ್ರೊ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿಯವರನ್ನು ಇಸ್ರೊ ಮುಖ್ಯಸ್ಥ ಎಸ್ ಸೋಮನಾಥ್ ಸೇರಿದಂತೆ ಅವರ ತಂಡ ಸ್ವಾಗತಿಸಿದರು. ಸೋಮನಾಥ್ ಅವರ ಬೆನ್ನುತಟ್ಟಿ ಪ್ರಧಾನಿಯವರು ಅಭಿನಂದಿಸಿದರು.
ನಂತರ ಇಸ್ರೊ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ ವರ್ಕ್ ಮಿಷನ್ ಕಂಟ್ರೋಲ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಯಂತ್ರೋಪಕರಣಗಳ ಕಾರ್ಯವಿಧಾನಗಳ ಬಗ್ಗೆ ಮಾಹಿತಿ ಪಡೆದುಕೊಂಡರು.