ಹಾವೇರಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದರಿಂದ ಬೇಸರಗೊಂಡು ಜೆಡಿಎಸ್ಗೆ ಹೋಗುತ್ತೇನೆ ಎಂದಿದ್ದ ನೆಹರು ಓಲೇಕಾರ ಇದೀಗ ಯುಟರ್ನ್ ಹೊಡಿದಿದ್ದು, ಬಿಜೆಪಿಯಲ್ಲೆ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷ ಬಿಟ್ಟು ಹೋಗುತ್ತಿಲ್ಲ ಎಂದರು. ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ ಓಲೇಕಾರ್ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ ಎಂದು ಆರೋಪಿಸಿದರು.
ಪಕ್ಷ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ನನಗೆ ಬೇಸರವಾಗಿತ್ತು. ಆದರೆ ನಾನು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಬಿಜೆಪಿ ಪಕ್ಷದಲ್ಲಿಯೇ ಇದ್ದೇನೆ. ಬೇರೆ ಯಾವ ಪಕ್ಷದ ಬಗ್ಗೆ ನನಗೆ ಒಲುವಿಲ್ಲ. ಬಿಜೆಪಿಯಲ್ಲೇ ಇದ್ದೇನೆ ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಸಿಎಂ ಬೊಮ್ಮಾಯಿ ಬೇಡ ಎಂದಿದ್ದಾರೆ. ಬೊಮ್ಮಾಯಿ ಕರೆದರೆ ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೇಳಿದರು.
ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗಿ ಅಲ್ಲಿ ಪಕ್ಷ ಸಂಘಟನೆ ಮಾಡಿ ಕಟ್ಟುವುದು ಸುಲಭವಲ್ಲ. ನಾವು ಇರುವ ಪಕ್ಷದಲ್ಲೇ ನಮಗೆ ಗೌರವವಿರುತ್ತದೆ. ಪದೇ ಪದೇ ಪಕ್ಷ ಬದಲಾವಣೆ ಮಾಡುತ್ತಿದ್ದರೆ ಗೌರವ ಇರುವುದಿಲ್ಲ ಎಂದರು.