ಮತದಾನ ಮಾಡದವರು ದೇಶದ್ರೋಹಿಗಳು: ನಾನಾ ಪಾಟೇಕರ್

ಮಂಗಳೂರು: ಮತದಾನ ನಮ್ಮ, ದೇಶದ ಅಸ್ತಿತ್ವ. ಐದು ವರ್ಷಕ್ಕೊಮ್ಮೆ ನಮಗೆ ಮತದಾನದ ಅವಕಾಶ ಸಿಗುತ್ತದೆ. ಇದನ್ನು ನಾವು ಸದಪಯೋಗಪಡಿಸಬೇಕು. ಯಾರ ಮತದಾನದಿಂದ ದೂರ ನಿಲ್ಲುತ್ತಾರೋ ಅವರೇ ನಿಜವಾದ ದೇಶದ್ರೋಹಿಗಳು ಎಂದು ಹಿರಿಯ ರಂಗಕರ್ಮಿ, ನಟ ನಾನಾ ಪಾಟೇಕರ್‌ ಹೇಳಿದ್ದಾರೆ.

ನಿರ್ದಿಗಂತದ ವತಿಯಿಂದ ಅಸ್ತಿತ್ವದ ಸಹಯೋಗದಲ್ಲಿ ನಗರದ ಸಂತ ಅಲೋಶಿಯಸ್‌ ಪರಿಗಣಿತ ವಿವಿಯಲ್ಲಿ ಆರು ದಿನಗಳ ಕಾಲ ಹಮ್ಮಿಕೊಂಡಿರುವ ‘ನೇಹದ ನೇಯ್ಗೆ’ ರಂಗೋತ್ಸವಕ್ಕೆ ಬುಧವಾರ ಸಂಜೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಅಶಾಂತಿಯ ಬಗ್ಗೆ ಗಟ್ಟಿಯಾಗಿ ದನಿ ಎತ್ತುವ ಹಿನ್ನೆಲೆಯಲ್ಲಿ ಕಲಾವಿದನಿಗೆ ರಂಗಭೂಮಿಯೇ ಅತ್ಯುತ್ತಮ ಮಾರ್ಗ. ಈ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಆಗಲಿ ಎಂದು ಹೇಳಿದರು.

ಸಮಾಜದಲ್ಲಿ ಕಾಣುತ್ತಿರುವ ಅಶಾಂತಿಯ ವಾತಾವರಣದ ವಿರುದ್ಧ ಧ್ವನಿ ಎತ್ತುವಲ್ಲಿ ಕಲಾವಿದನಿಗೆ ರಂಗಭೂಮಿ ಅಸ್ತ್ರವಾಗಬೇಕು. ನಮಗೆ ಸರಿಕಾಣದ್ದನ್ನು ಮುಕ್ತವಾಗಿ ಹೇಳಿಕೊಳ್ಳುವಲ್ಲಿ ರಂಗಭೂಮಿ ಬಹುದೊಡ್ಡ ಸಾಧನ. ಆದರೆ ನಾವು ಉಪಯೋಗಿಸುವ ಶಬ್ಧ, ಭಾಷೆ ಮಾತ್ರ ಕೆಟ್ಟದಾಗಿರಬಾರದು ಎಂದು ಅವರು ಹೇಳಿದರು.

ಆಝಾನ್‌ಗೆ ಮೌನವಾದ ಪಾಟೇಕರ್: ತನ್ನ ಭಾಷಣದ ಮಧ್ಯೆ ಸಮೀಪದ ಮಸೀದಿಯಿಂದ ಮಗ್ರಿಬ್ ಆಝಾನ್ ಮೊಳಗಿದಾಗ ಮೌನವಾದ ಪಾಟೇಕರ್, ಆಝಾನ್ ಮುಗಿದ ಬಳಿಕ ಮಾತು ಮುಂದುವರಿಸಿ ನಾವು ಪರಸ್ಪರ ಧರ್ಮಗಳನ್ನು ಗೌರವಿಸಿದರೆ ಸಮಾಜದಲ್ಲಿ ತಲೆದೋರುವ ಭಿನ್ನಾಭಿಪ್ರಾಯ, ಜಗಳಗಳು ಅಂತ್ಯವಾಗಲಿದೆ ಎಂದರು.
ನಾವು ಸಣ್ಣವರಿದ್ದಾಗ ನಮ್ಮ ಹಳ್ಳಿಯಲ್ಲೂ ಬೆಳಗ್ಗೆ ಈ ಆಝಾನ್ ಕರೆಗೆ ಎಚ್ಚರವಾಗಿ ನಮ್ಮ ದೈನಂದಿನ ಚಟುವಟಿಕೆಗಳು ಆರಂಭಗೊಳ್ಳುತ್ತಿತ್ತು ಎಂದು ಸ್ಮರಿಸಿದರು.

Latest Indian news

Popular Stories