3 ಈಶಾನ್ಯ ರಾಜ್ಯಗಳ ಚುನಾವಣೆಯ ಮತ ಎಣಿಕೆ ಆರಂಭ: ತ್ರಿಪುರಾದಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ

ನವದೆಹಲಿ: ಮೂರು ಈಶಾನ್ಯ ರಾಜ್ಯಗಳ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, ಮೂರು ರಾಜ್ಯಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. 

 ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆಗೆ ಫೆಬ್ರವರಿ 27 ರಂದು ಚುನಾವಣೆ ನಡೆದಿದ್ದು, ಫೆಬ್ರವರಿ 16 ರಂದು ತ್ರಿಪುರಾದಲ್ಲಿ ಮತದಾನ ನಡೆದಿತ್ತು. ಮೂರು ರಾಜ್ಯಗಳಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಈ ಬಾರಿ ಬಿಜೆಪಿ ಮೂರು ರಾಜ್ಯಗಳಲ್ಲಿ ಗೆಲ್ಲುವ ಭರವಸೆಯಲ್ಲಿದೆ. 

ಮೂರು ರಾಜ್ಯಗಳಲ್ಲದೆ, ಫೆಬ್ರವರಿ 27 ರಂದು ಮತದಾನ ನಡೆದ ತಮಿಳುನಾಡಿನ ಈರೋಡ್ (ಪೂರ್ವ), ಪಶ್ಚಿಮ ಬಂಗಾಳದ ಸಾಗರ್ದಿಘಿ, ಜಾರ್ಖಂಡ್‌ನ ರಾಮಗಢ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಕೂಡ ಇಂದು ಪ್ರಕಟವಾಗಲಿದೆ.

ಫೆಬ್ರವರಿ 26 ರಂದು ಮಹಾರಾಷ್ಟ್ರದ ಕಸ್ಬಾ ಪೇಠ್ ಮತ್ತು ಚಿಂಚ್‌ವಾಡ್‌ಗೆ ಮತದಾನ ನಡೆಯಿತು. ವಿಧಾನಸಭಾ ಚುನಾವಣೆಯ ಹೊರತಾಗಿ, ಶಿವಸೇನೆಯ ಎರಡು ಬಣಗಳ ನಡುವಿನ ಪ್ರಾಬಲ್ಯಕ್ಕಾಗಿ ಉಪಚುನಾವಣೆಯು ವ್ಯಾಪಕ ಕುತೂಹಲವನ್ನು ಕೆರಳಿಸಿದೆ.

ಭಾರತೀಯ ಜನತಾ ಪಕ್ಷವು ತ್ರಿಪುರಾದಲ್ಲಿ ಆರಂಭಿಕ ಮತ ಎಣಿಕೆಯಲ್ಲಿ ಮುಂದಿದ್ದರೆ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಸ್ಥಳೀಯ ಪಕ್ಷಗಳು ಮುಂಚೂಣಿ ಸಾಧಿಸುತ್ತಿವೆ.

Latest Indian news

Popular Stories