ವಿಪಕ್ಷಗಳ ದೂರವಾಣಿ ಕದ್ದಾಲಿಕೆ-ಪೊಲೀಸ್‌ ವರಿಷ್ಠಾಧಿಕಾರಿ ವರ್ಗಾವಣೆ!

ಮುಂಬೈ: ವಿಪಕ್ಷಗಳ ದೂರವಾಣಿ ಕದ್ದಾಲಿಕೆ(Phone Tapping) ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರ ಪೊಲೀಸ್‌ ವರಿಷ್ಠಾಧಿಕಾರಿ ರಶ್ಮಿ ಶುಕ್ಲಾ ಅವರನ್ನು ಚುನಾವಣ ಆಯೋಗ(Election Commission) ಸೋಮವಾರ (ನ.04) ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ವರದಿ ಪ್ರಕಾರ, ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಆಡಳಿತಾರೂಢ ಮಹಾಯುತಿ ಮೈತ್ರಿಯ ಕುಮ್ಮಕ್ಕಿನಿಂದ ಪೊಲೀಸ್‌ ವರಿಷ್ಠಾಧಿಕಾರಿ ಶುಕ್ಲಾ ದೂರವಾಣಿ ಕದ್ದಾಲಿಕೆ ಮಾಡಿರುವುದಾಗಿ ಕಾಂಗ್ರೆಸ್‌ ನೇತೃತ್ವದ ವಿಪಕ್ಷ ಮೈತ್ರಿ ಆರೋಪಿಸಿದ್ದವು.

ಒಂದು ವೇಳೆ ರಶ್ಮಿ ಶುಕ್ಲಾ ಉನ್ನತ ಹುದ್ದೆಯಲ್ಲಿ ಮುಂದುವರಿದರೆ ಪಾರದರ್ಶಕ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಆಯೋಗಕ್ಕೆ ದೂರು ನೀಡಿತ್ತು.ಶುಕ್ಲಾ ಅವರ ಜವಾಬ್ದಾರಿಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಹಿರಿಯ ಐಪಿಎಸ್‌ ಅಧಿಕಾರಿ, ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್‌ ಅವರಿಗೆ ಹಸ್ತಾಂತರಿಸುವಂತೆ ಚುನಾವಣ ಆಯೋಗ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.

ಮಹಾರಾಷ್ಟ್ರದ ಮುಂದಿನ ಪೊಲೀಸ್‌ ವರಿಷ್ಠಾಧಿಕಾರಿ ಆಯ್ಕೆಗಾಗಿ ನವೆಂಬರ್‌ 5ರೊಳಗೆ ಮೂವರು ಐಪಿಎಸ್‌ ಅಧಿಕಾರಿಗಳ ಹೆಸರನ್ನು ಕಳುಹಿಸುವುದಾಗಿ ಆಯೋಗ ತಿಳಿಸಿದೆ.

Latest Indian news

Popular Stories