ಬಿಜೆಪಿಯವರ ಹೆಣದ ಮೇಲಿನ ರಾಜಕೀಯ ಕರ್ನಾಟಕಕ್ಕೆ ಕಪ್ಪು ಚುಕ್ಕೆ – ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪಿ.ಎ. ಹನೀಫ್ ಆಕ್ರೋಶ

Lಗೋಣಿಕೊಪ್ಪಲು, ಏ. 23: ಯಾವುದೇ ಅಭಿವೃದ್ಧಿ ಮತ್ತು ಜನಪರ ರಾಜಕಾರಣವನ್ನು ಮುಂದಿಟ್ಟು ಚುನಾವಣೆ ಎದುರಿಸಲು ಹಿಂದಿನಿಂದಲೂ ವಿಫಲಗೊಂಡಿರುವ ಭಾರತೀಯ ಜನತಾ ಪಕ್ಷ ಇದೀಗ ಹೆಣದ ಮೇಲಿನ ರಾಜಕೀಯ ಮಾಡುತ್ತಿದೆ. ಬಿಜೆಪಿಯವರ ಈ ಕೀಳು ಮಟ್ಟದ ಚುನಾವಣಾ ಪ್ರಚಾರ ತಂತ್ರ ಕರ್ನಾಟಕದ ರಾಜಕಾರಣಕ್ಕೆ ಕಪ್ಪು ಚುಕ್ಕೆ ಮೂಡಿಸುತ್ತಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಪಿ.ಎ. ಹನೀಫ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೇವಲ 10 ತಿಂಗಳಿನಲ್ಲಿ ಮಾಡಿ ಮುಗಿಸಿದೆ. ಅಲ್ಲದೆ ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಘೋಷಿಸಿದ ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಕಾರಣದಿಂದ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಧೈರ್ಯದಿಂದ ಮತದಾರರ ಬಳಿ ತೆರಳಿ ಮತಯಾಚಿಸುತ್ತಿದೆ. ಇದರಿಂದ ವರ್ಚಸ್ಸು ಕಳೆದುಕೊಂಡಿರುವ ಕೊಡಗಿನ ಬಿಜೆಪಿಯ ನಾಯಕರು, ಎಂಎಲ್ಸಿ ಮತ್ತು ಮಾಜಿ ಜನ ಪ್ರತಿನಿಧಿಗಳು ಹೆಣದ ಮೇಲೆ ರಾಜಕೀಯ ಮಾಡುವ ಚಿಂತೆಯಲ್ಲಿದ್ದಾರೆ. ಹೆಣವನ್ನು ಮುಂದಿಟ್ಟುಕೊಂಡು ಮಾಡುತ್ತಿರುವ ಬಿಜೆಪಿಯವರ ಈ ರಾಜಕೀಯ ಪಕ್ಷ ರಾಜಕಾರಣಕ್ಕೆ ಶೋಭೆ ತರುವುದಿಲ್ಲ ಎಂದು ಟೀಕಿಸಿದ್ದಾರೆ.

ಜಿಲ್ಲೆಯಲ್ಲಿಯೂ ಇದೀಗ ಬಿಜೆಪಿ ಪಕ್ಷದ ಹೆಣದ ರಾಜಕೀಯ ಆರಂಭಗೊಂಡಿದೆ. ಇತ್ತೀಚಿಗೆ ಸಿದ್ದಾಪುರದ ಬಳಿ ನಡೆದ ವಾಹನ ಅಪಘಾತ ಪ್ರಕರಣವನ್ನು ಕೋಮು ದ್ವೇಷ ಹೆಚ್ಚಿಸಲು ಬಳಸಿಕೊಳ್ಳಲಾಗಿದೆ. ಕೊಡಗಿನ ನೈಜ್ಯ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಇದುವರೆಗೂ ಯಾವುದೇ ಧ್ವನಿಯೆತ್ತದ ಎಂಎಲ್ಸಿ ಎಂ.ಪಿ. ಸುಜಾ ಕುಶಾಲಪ್ಪ ಅವರು, ಈ ಪ್ರಕರಣವನ್ನು ಚುನಾವಣಾ ಪ್ರಚಾರ ತಂತ್ರಕ್ಕೆ ಬಳಸಿ ರಸ್ತೆ ತಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿದ್ದು ಅವರ ಕೀಳು ಮಟ್ಟದ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿರುವ ಹನೀಫ್, ಕಳೆದ ಎರಡು ದಿನಗಳ ಹಿಂದೆ ಸುಂಟಿಕೊಪ್ಪದಲ್ಲಿ ನಡೆದ ಅಪಘಾತ ಪ್ರಕರಣವನ್ನು ಕಾಂಗ್ರೆಸ್ ಪಕ್ಷದ ಪ್ರಬುದ್ಧತೆಯಿಂದಾಗಿ ಹೆಣದ ರಾಜಕೀಯಕ್ಕೆ ಬಳಕೆ ಮಾಡಿಲ್ಲ. ಧರ್ಮದ ಆಧಾರದಲ್ಲಿ ಜನರ ಭಾವನೆಯನ್ನು ಕೆರಳಿಸಿ ಮತಪಡೆಯುವ ಬಿಜೆಪಿಯವರ ಎಂದಿನ ಚುನಾವಣಾ ತಂತ್ರಕ್ಕೆ ಕೊಡಗಿನ ಪ್ರಜ್ಞಾವಂತ ಮತದಾರರು ಇನ್ನು ಬಲಿಯಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣದಲ್ಲಿ ಆರೋಪಿಯ ಧರ್ಮವನ್ನು ಮುಂದಿಟ್ಟು ಬಿಜೆಪಿ ನಡೆಸುತ್ತಿರುವ ಸಾವಿನ ರಾಜಕಾರಣ ಅತ್ಯಂತ ಅನಾರೋಗ್ಯಕರ ಮತ್ತು ಅಸಹ್ಯಕರವಾದ ಬೆಳವಣಿಗೆಯಾಗಿದೆ. ಯಾವುದೇ ಹತ್ಯೆ ಸಮರ್ಥನೀಯ ಅಲ್ಲ. ಹತ್ಯಗೈದ ಕಟುಕರನ್ನು ಈ ನೆಲದ ಕಾನೂನು ಶಿಕ್ಷಿಸಲೇಬೇಕು. ಉತ್ತರ ಪ್ರದೇಶದ ಅಸಹಾಯಕ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಬಿಜೆಪಿ ನಾಯಕ ಸೆಂಗರ್ ಪ್ರಕರಣದಲ್ಲಿ, ದೇಶದ ಹೆಮ್ಮೆಯ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂಬ ತೀವ್ರವಾದ ಟೀಕೆಗೆ ಗುರಿಯಾದ ಬ್ರಿಜ್ ಭೂಷಣ್ ಪ್ರಕರಣದಲ್ಲಿ, ಮಣಿಪುರದ ಆದಿವಾಸಿ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ದೌರ್ಜನ್ಯ ನಡೆಸಿದ ಘೋರವಾದ ಘಟನೆಯಲ್ಲಿ, ಗುಜರಾತಿನ ಬಿಲ್ಕೀಸ್ ಪ್ರಕರಣದ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಸ್ವತಃ ಅಪರಾಧಿಯ ಸ್ಥಾನದಲ್ಲಿ ನಿಂತಿರುವುದು ಬಿಜೆಪಿ ಪಕ್ಷವೇ ಆಗಿದೆ. ಮಹಿಳೆಯರ ಬದುಕು, ಸುರಕ್ಷತೆ ಮತ್ತು ಘನತೆಯ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿಯಿಲ್ಲದ ಈ ಬಿಜೆಪಿಗೆ, ಅಮಾಯಕರ ಸಾವಿನ ಬಗ್ಗೆ ಧಿಡೀರನೆ ಇನ್ನಿಲ್ಲದ ಕಾಳಜಿ ಉಕ್ಕಿರುವುದರ ಹಿಂದಿನ ಕುತಂತ್ರವೇನು ಎಂದು ಕೇಳಿರುವ ಹನೀಫ್, ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ ಮುಖಂಡರಿಗೆ, ಕಳೆದ ವರ್ಷ ಉಡುಪಿಯ ನೇಜಾರುವಿನಲ್ಲಿ ಇಬ್ಬರು ಹೆಣ್ಣುಮಕ್ಕಳನ್ನೂ ಒಳಗೊಂಡಂತೆ ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಪ್ರವೀಣ್ ಚೌಗಲೆ ಎಂಬಾತ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮಾನವೀಯತೆಯ ಕಾಳಜಿ ಎಲ್ಲಿ ಮರೆಯಾಗಿತ್ತು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಧರ್ಮದ ಅಫೀಮು ತಿಂದಿರುವ ಯಾವುದೇ ಕೋಮು ಕ್ರಿಮಿಗಳಿಗೆ ಯಾವುದೇ ಸರಕಾರವಿದ್ದರೂ ಅಂಜಿಕೆಯಿರುವುದಿಲ್ಲ. ಇಂತಹ ಕ್ರಿಮಿಗಳನ್ನು ಯಾವುದೇ ಮುಲಾಜಿಲ್ಲದೆ ಹೆಡೆಮುರಿ ಕಟ್ಟಿ ಹುಟ್ಟಡಗಿಸಬೇಕು. ಮನುಷ್ಯತ್ವ ಮರೆತ ಇಂತಹ ಕ್ರಿಮಿಗಳ ಹುಟ್ಟಡಗಿಸಲು ಯಾರ ತಕರಾರು ಇಲ್ಲ. ಹೀಗಿರುವಾಗ ಬಿಜೆಪಿ ಪ್ರತಿ ಹತ್ಯೆಯಲ್ಲೂ ಹೆಣದ ರಾಜಕೀಯ ಮಾಡುವ ಉದ್ದೇಶವೇನು? ಎಂಬುದೇ ಅರ್ಥವಾಗುತ್ತಿಲ್ಲ. ತಾರತಮ್ಯ ನೀತಿ ಅನುಸರಿಸುತ್ತಿರುವ ಬಿಜೆಪಿ ಪಕ್ಷದ ಅನೈತಿಕ ರಾಜಕಾರಣಕ್ಕೆ ಅಂತ್ಯ ಹಾಡಲು ಇದೀಗ ಸೂಕ್ತ ಸಮಯ ಬಂದಿದೆ. ಅದರಿಂದ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸನ್ನು ಗೆಲ್ಲಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಅಲ್ಲದೆ, ದೇಶದ ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷದ ಗೆಲುವು ಅನಿವಾರ್ಯವಾಗಿದೆ ಎಂದು ಪಿ.ಎ. ಹನೀಫ್ ಒತ್ತಿ ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸಯ್ಯದ್ ಭಾವ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಕೆ. ಜೆ. ಪೀಟರ್, ಪದಾಧಿಕಾರಿಗಳಾದ ಕೌಸರ್, ಇಬ್ರಾಹಿಂ, ರಿಯಾಜ್ ಮತ್ತು ಅಝೀಝ್ ಉಪಸ್ಥಿತರಿದ್ದರು

Latest Indian news

Popular Stories