ಭಾರತದಲ್ಲಿ ನಡೆಯುವ ವಿಶ್ವಕಪ್’ಗೆ ಪಾಕಿಸ್ತಾನ ತಂಡ ಪ್ರಕಟ

ಇಸ್ಲಮಾಬಾದ್: ಮುಂದಿನ ತಿಂಗಳಿನಿಂದ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆ ಪಾಕಿಸ್ತಾನ ತಂಡ ಪ್ರಕಟವಾಗಿದೆ. 15 ಸದಸ್ಯರ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಬಾಬರ್ ಅಜಂ ಮುನ್ನಡೆಸಲಿದ್ದಾರೆ.

ಏಷ್ಯಾ ಕಪ್ ಕೂಟದಲ್ಲಿ ಗಾಯಗೊಂಡಿದ್ದ ವೇಗಿ ನಸೀಂ ಶಾ ಅವರು ವಿಶ್ವಕಪ್ ನಿಂದ ಹೊರಬಿದ್ದಿದ್ದಾರೆ. ಪಾಕಿಸ್ಥಾನ ತಂಡದ ಪ್ರಮುಖ ಬೌಲರ್ ಆಗಿದ್ದ ನಸೀಂ ಅಲಭ್ಯತೆ ಈ ಬಾರಿ ಬಾಬರ್ ಪಡೆಗೆ ಕೊರತೆಯಾಗಲಿದೆ. ನಸೀಂ ಬದಲಿಗೆ ಅನುಭವಿ ವೇಗಿ ಹಸನ್ ಅಲಿ ಅವರನ್ನು ಸೇರಿಸಿಕೊಳ್ಳಲಾಗಿದೆ.

ಹಸನ್ 2017 ರಲ್ಲಿ ಪದಾರ್ಪಣೆ ಮಾಡಿದ ನಂತರ ಪಾಕಿಸ್ತಾನಕ್ಕಾಗಿ 60 ಏಕದಿನಗಳಲ್ಲಿ ಕಾಣಿಸಿಕೊಂಡಿದ್ದಾರೆ, 30.36 ಸರಾಸರಿಯಲ್ಲಿ 91 ವಿಕೆಟ್ ಗಳನ್ನು ಪಡೆದಿದ್ದಾರೆ. 2023ರ ಜನವರಿಯಲ್ಲಿ ಕರಾಚಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಕೊನೆಯದಾಗಿ ಹಸನ್ ಆಡಿದ್ದರು.

ಬಾಬರ್ ಅಜಮ್ ನೇತೃತ್ವದ ತಂಡದಲ್ಲಿ, ಆಲ್ ರೌಂಡರ್ ಫಹೀಮ್ ಅಶ್ರಫ್, ಮೊಹಮ್ಮದ್ ಹ್ಯಾರಿಸ್ ಮತ್ತು ಜಮಾನ್ ಖಾನ್ ಅವರನ್ನು ಏಷ್ಯಾ ಕಪ್‌ ನಲ್ಲಿ ಆಡಿದ ತಂಡದಿಂದ ಹೊರಗಿಡಲಾಗಿದೆ. ಆದರೆ ಹ್ಯಾರಿಸ್ ಮತ್ತು ಜಮಾನ್ ಖಾನ್ ಅವರನ್ನು ಮಿಸ್ಟರಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಜೊತೆಗೆ ಮೀಸಲು ಆಟಗಾರರಾಗಿ ಸೇರಿಸಲಾಗಿದೆ. ಶದಾಬ್ ಖಾನ್ ಅವರನ್ನು ಪಂದ್ಯಾವಳಿಗೆ ಉಪನಾಯಕನಾಗಿ ಇರಲಿದ್ದಾರೆ.

ಹ್ಯಾರಿಸ್ ರೌಫ್, ಹಸನ್ ಅಲಿ, ಶಾಹೀನ್ ಅಫ್ರಿದಿ ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ ಅವರ ನಾಲ್ವರ ವೇಗದ ದಾಳಿಯೊಂದಿಗೆ ಶಾದಾಬ್ ಖಾನ್, ಉಸಾಮಾ ಮಿರ್ ಮತ್ತು ಮೊಹಮ್ಮದ್ ನವಾಜ್ ಮೂವರು ಸ್ಪಿನ್ನರ್‌ಗಳೊಂದಿಗೆ ಪಾಕ್ ಪ್ರಯಾಣ ಬೆಳೆಸಲಿದೆ.

ಪಾಕಿಸ್ತಾನವು ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅವರ ಟೂರ್ನಮೆಂಟ್‌ನ ಆರಂಭಿಕ ಪಂದ್ಯವು ನೆದರ್ಲ್ಯಾಂಡ್ಸ್ ವಿರುದ್ಧ ಅಕ್ಟೋಬರ್ 5 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

ಪಾಕಿಸ್ತಾನ ತಂಡ: ಬಾಬರ್ ಆಜಮ್ (ನಾ), ಶಾದಾಬ್ ಖಾನ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್ (ವಿ.ಕೀ) , ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರೌಫ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂ.

Latest Indian news

Popular Stories