
ಪಂಚಮ ಸಾಲಿ 2 ಎ ಮೀಸಲಾತಿ; ಮಾತು ತಪ್ಪಿದರೆ ಅಕ್ಟೋಬರ್ 1 ರಿಂದ ಬೃಹತ್ ಹೋರಾಟ – ಬಸವಶ್ರೀ ಎಚ್ಚರಿಕೆ
ಬೆಂಗಳೂರು: ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪ್ರತಿದಿನ ಎಂಬಂತೆ ಹೊಸ ಹೊಸ ಸವಾಲುಗಳು ಎದುರಾಗುತ್ತಿದ್ದು ಇದೀಗ ಪಂಚಮಸಾಲಿ 2ಎ ಮೀಸಲಾತಿ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.ಕೊಟ್ಟ ಮಾತಿನಂತೆ ಸೆಪ್ಟೆಂಬರ್ 15ರ ಒಳಗೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ಅಕ್ಟೋಬರ್ 1 ರಿಂದ ಬೃಹತ್ ಹೋರಾಟ ನಡೆಸುವುದಾಗಿ ಬಸವ ಶ್ರೀ ಎಚ್ಚರಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಮೀಸಲಾತಿಗಾಗಿ ನಡೆದ ಚಳುವಳಿಗಾರರ ಮಹತ್ವದ ದುಂಡು ಮೇಜಿನ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2021ರ ಸಪ್ಟೆಂಬರ್ 15 ರೊಳಗಾಗಿ ಮೀಸಲಾತಿ ಜಾರಿ ಮಾಡುವುದಾಗಿ ಈ ಹಿಂದಿನ ಸಿಎಂ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ್ದರು. ಹೀಗಾಗಿ ಮತ್ತೆ ಸರ್ಕಾರಕ್ಕೆ ಈ ವಿಚಾರವನ್ನ ನೆನಪಿಸುವ ನಿಟ್ಟಿನಲ್ಲಿ ದುಂಡು ಮೇಜಿನ ಸಭೆ ನಡೆಸಿದ್ದೇವೆ ಎಂದರು.
ಸಭೆಯಲ್ಲಿ ಐದು ನಿರ್ಣಯಗಳನ್ನ ತೆಗೆದುಕೊಳ್ಳಲಾಗಿದೆ. ಸರ್ಕಾರ ಕೊಟ್ಟ ಮಾತಿನಂತೆ ಸೆಪ್ಟಂಬರ್ 15 ರೊಳಗಾಗಿ ಮೀಸಲಾತಿ ಅನುಷ್ಠಾನಗೊಳಿಸಬೇಕು. ಒಂದುವೇಳೆ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದಲ್ಲಿ ಅಕ್ಟೋಬರ್ 1ರಿಂದ ಮತ್ತೆ ಹೋರಾಟ ಆರಂಭಿಸಲಾಗುವುದು. ಆಗಸ್ಟ್ 26ರಿಂದ ಸೆಪ್ಟಂಬರ್ 30ರವರೆಗೆ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಧ್ಯೇಯವಾಕ್ಯದೊಂದಿಗೆ ಜಾಗೃತಿ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ನಮ್ಮ ಸಮಾಜದ ಹೋರಾಟದಲ್ಲಿ ಭಾಗಿಯಾದ ಬಸವನಗೌಡ ಪಾಟೀಲ ಯತ್ನಾಳ್, ಅರವಿಂದ್ ಬೆಲ್ಲದ್ ಅವರಿಗೆ ಅನ್ಯಾಯ ಆಗಿದೆ. ಈ ಅನ್ಯಾಯಕ್ಕೆ ಸಮಯ ಬಂದಾಗ ಉತ್ತರ ನೀಡುತ್ತೇವೆ. ನಮ್ಮ ಪೀಠಕ್ಕೆ ಮಂತ್ರಿ, ಮುಖ್ಯಮಂತ್ರಿ ಸ್ಥಾನಕ್ಕಿಂತ ಮೀಸಲಾತಿ ಮುಖ್ಯ. ಕೊನೆಯವರೆಗೂ ನಮ್ಮವರಿಗೆ ಸ್ಥಾನ ಕೊಡಬೇಕು ಅಂತಾ ಇತ್ತು. ಆದರೆ ಕೊನೆ ಕ್ಷಣದಲ್ಲಿ ಬದಲಾಯ್ತು. ಅದಕ್ಕೆ ಮುಂದೆ ಉತ್ತರ ಕರ್ನಾಟಕದ ಜನರು ತಕ್ಕ ಉತ್ತರ ನೀಡುತ್ತಾರೆ ಎಂದರು.




