‘ಕಾಶ್ಮೀರವಾಲಾ’ದಲ್ಲಿ ‘ದೇಶದ್ರೋಹಿ’ ಲೇಖನ ಆರೋಪ : ಪಿಎಚ್’ಡಿ ವಿದ್ಯಾರ್ಥಿಗೆ ಜಾಮೀನು

ಶ್ರೀನಗರ: 2011ರಲ್ಲಿ ಶ್ರೀನಗರದ ಡಿಜಿಟಲ್ ಮ್ಯಾಗಝಿನ್ ‘ಕಾಶ್ಮೀರವಾಲಾ’ದಲ್ಲಿ ‘ದೇಶದ್ರೋಹಿ’ ಲೇಖನ ಬರೆದಿದ್ದಾರೆಂದು ಆರೋಪಿಸಿ 2022ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯಡಿ ಬಂಧಿಸಲ್ಪಟ್ಟಿದ್ದ ಪಿಎಚ್‌ಡಿ ವಿದ್ಯಾರ್ಥಿ ಆಲಾ ಫಾಝಿಲಿಗೆ ಜಮ್ಮುವಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಕಾಶ್ಮೀರ ವಿವಿಯಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದ ಫಾಝಿಲಿಯನ್ನು ಜಮ್ಮುಕಾಶ್ಮೀರ ಪೋಲಿಸ್‌ನ ರಾಜ್ಯ ತನಿಖಾ ಏಜೆನ್ಸಿ(ಎಸ್‌ಐಎ)ಯು ‘ಗುಲಾಮಗುರಿಯ ಶೃಂಖಲೆಗಳು ಮುರಿಯಲಿವೆ’ ಎಂಬ ಶೀರ್ಷಿಕೆಯ ಲೇಖನಕ್ಕಾಗಿ ಎ.17,2022ರಂದು ಬಂಧಿಸಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ ಫಾಜಿಲಿ ಜಮ್ಮುವಿನ ಕೋಟ ಭಲ್ವಾಲ್ ಜೈಲಿನಿಂದ ಬಿಡುಗಡೆಗೊಂಡಿದ್ದು,ಮಂಗಳವಾರ ಸಂಜೆ ತನ್ನ ಮನೆಗೆ ಮರಳಿದ್ದಾರೆ.
‘ತೀವ್ರ ಪ್ರಚೋದನಕಾರಿ ಮತ್ತು ದೇಶದ್ರೋಹಿ ಲೇಖನವು ಭಯೋತ್ಪಾದನೆಯ ಲಜ್ಜೆಗೇಡಿ ವೈಭವೀಕರಣದ ಮೂಲಕ ಅಶಾಂತಿಯನ್ನು ಸೃಷ್ಟಿಸುವ,ಅಮಾಯಕ ಯುವಜನರನ್ನು ಹಿಂಸಾಚಾರದ ಮಾರ್ಗಕ್ಕೆ ತಳ್ಳುವ ಮತ್ತು ಕೋಮು ಅಶಾಂತಿಯನ್ನು ಸೃಷ್ಟಿಸುವ ಮತ್ತು ಜಮ್ಮುಕಾಶ್ಮೀರದಾದ್ಯಂತ ಕಾನೂನುಬಾಹಿರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಉದ್ದೇಶವನ್ನು ಹೊಂದಿದೆ’ ಎಂದು ಎಸ್‌ಐಎ ಹೇಳಿತ್ತು.
ಫಾಝಿಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿರೋಧಿಸಲು ಪ್ರಾಸಿಕ್ಯೂಷನ್ ಯುಎಪಿಎ ಕಲಂ 43-ಡಿ(5) ಅನ್ನು ಉಲ್ಲೇಖಿಸಿತ್ತು. ಈ ಕಲಮ್‌ನಡಿ ಪ್ರಾಸಿಕ್ಯೂಷನ್ ವಾದವನ್ನು ಆಲಿಸದೆ ನ್ಯಾಯಾಲಯವು ಯುಎಪಿಎ ಶಂಕಿತ ವ್ಯಕ್ತಿಗೆ ಜಾಮೀನು ಮಂಜೂರು ಮಾಡುವಂತಿಲ್ಲ. ಎಸ್‌ಐಎ ಆರೋಪಗಳನ್ನು ತಿರಸ್ಕರಿಸಿದ ನ್ಯಾಯಾಲಯವು ಲೇಖನದಲ್ಲಿ ಹಿಂಸಾಚಾರ ಅಥವಾ ಭಯೋತ್ಪಾದನೆಯನ್ನು ಪ್ರಚೋದಿಸುವ ಯಾವುದೇ ಅಂಶಗಳಿಲ್ಲ ಎಂದು ಎತ್ತಿ ಹಿಡಿದಿದೆ.
ಸರ್ವೋಚ್ಚ ನ್ಯಾಯಾಲಯದ ಮೂರು ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಾಲಯವು ಬಂಧನದ ಸಂದರ್ಭದಲ್ಲಿ ಬಂಧನದ ಸಂದರ್ಭದಲ್ಲಿ ಫಾರ್ಮಾಸ್ಯೂಟಿಕಲ್ ಸೈನ್ಸ್‌ನಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ ಫಾಜಿಲಿಗೆ ಜಾಮೀನು ನಿರಾಕರಿಸಿದರೆ ಅದು ಸಂವಿಧಾನದ ವಿಧಿ 21ರಡಿ ಖಾತರಿ ಪಡಿಸಲಾಗಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.
ಲೇಖನವು 2011ರಲ್ಲೇ ಪ್ರಕಟಗೊಂಡಿದ್ದರೂ ಎಪ್ರಿಲ್ 2022ರಲ್ಲಿ ಫಾಝಿಲಿ ವಿರುದ್ಧ ಎಫ್‌ಐಆರ್ ದಾಖಲಾಗುವವರೆಗೂ ಸರಕಾರವು ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ ಎಂದು ಬೆಟ್ಟು ಮಾಡಿರುವ ನ್ಯಾಯಾಲಯವು,ಈ ವಿಳಂಬವು ಲೇಖನವು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವನ್ನುಂಟು ಮಾಡಿರಲಿಲ್ಲ ಮತ್ತು ಉಗ್ರವಾದ ಸಂಬಂಧಿತ ಚಟುವಟಿಕೆಗಳನ್ನು ಪ್ರಚೋದಿಸಿರಲಿಲ್ಲ ಎನ್ನುವುದನ್ನು ಸೂಚಿಸುತ್ತಿದೆ ಎಂದು ಹೇಳಿತು.