ಪ್ರಧಾನಿ ಮೋದಿ ಗುರಿಯಾಗಿಸಿ ಪನೌತಿ, ಜೇಬುಗಳ್ಳ ಹೇಳಿಕೆ: ರಾಹುಲ್‌ ಗಾಂಧಿಗೆ ಇಸಿ ನೋಟಿಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ‘ಪನೌತಿ’, ‘ಪಿಕ್‌ಪಾಕೆಟ್’ ಮತ್ತು ಉದ್ಯಮಿಗಳ ಸಾಲ ಮನ್ನಾಗಾರ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ(ಇಸಿ) ಗುರುವಾರ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಶನಿವಾರ ಸಂಜೆಯೊಳಗೆ ಉತ್ತರಿಸುವಂತೆ ಸೂಚಿಸಿದೆ.

ಈ ಸಂಬಂಧ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ), ಕಾಂಗ್ರೆಸ್‌ ಮಾಜಿ ಅಧ್ಯಕ್ಷರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಹಿರಿಯ ನಾಯಕರೊಬ್ಬರು ಇಂತಹ ಭಾಷೆಯನ್ನು ಬಳಸುವುದು “ಅಯೋಗ್ಯ” ಎಂದು ಕಿಡಿ ಕಾರಿತ್ತು.

ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುವುದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದಿರುವ ಬಿಜೆಪಿ ನಾಯಕರು, ರಾಹುಲ್ ಗಾಂಧಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಇಸಿಗೆ ಒತ್ತಾಯಿಸಿದ್ದರು.

ಪಿಎಂ ಎಂದರೆ ‘ಪನೌತಿ’ ಎಂದು ರಾಹುಲ್ ಗಾಂಧಿ ಹೇಳಿದ್ದರು. ಉದ್ಯಮಿ ಗೌತಮ್‌ ಅದಾನಿ ಅವರು ಜನರ ಜೇಬಿಗೆ ಕನ್ನಾ ಹಾಕುವಾಗ ಮೋದಿ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದರು.‌ ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಿ ಮೋದಿ ದುರಾದೃಷ್ಟ ತಂದರು ಎಂದು ಹೀಗಳೆದಿದ್ದರು. ಹಿಂದಿಯ ಪನೌತಿ ಎಂಬ ಪದಕ್ಕೆ ಕನ್ನಡದಲ್ಲಿ ಅಪಶಕುನ ಎನ್ನಲಾಗುತ್ತದೆ.

Latest Indian news

Popular Stories