ಬೆಂಗಳೂರು: ವಿನೇಶ್ ಫೋಗಟ್ ಪ್ರಕರಣದಲ್ಲಿ ಸಹನಟ ಪ್ರಕಾಶ್ ರೈ ನಿಲುವಿನ ವಿರುದ್ಧ ಕಿಡಿಕಾರಿರುವ ನಟ ಚೇತನ್ ಅಹಿಂಸಾ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬೆಂಬಲ ವ್ಯಕ್ತಪಡಿಸಿ ಮಾಡಿರುವ ಪೋಸ್ಟ್ ವೊಂದು ಇದೀಗ ಎಲ್ಲರಲ್ಲೂ ಅಚ್ಚರಿಯುಂಟು ಮಾಡಿದೆ.
50 ಕಿಲೋಗಿಂತ 100 ಗ್ರಾಂ ತೂಕ ಹೆಚ್ಚಳವಾದ ಹಿನ್ನೆಲೆ ಪ್ಯಾರಿಸ್ ಒಲಿಂಪಿಕ್ಸ್-2024ರ ಫೈನಲ್ ಕುಸ್ತಿ ಪಂದ್ಯದಿಂದ ಹೊರ ಬಿದ್ದ ವಿನೇಶ್ ಫೋಗಟ್ ಪರ, ಮೋದಿ ವಿರುದ್ಧ ಪೋಸ್ಟ್ ಹಾಕಿದ್ದ ಪ್ರಕಾಶ್ ರೈ ನಡೆಯನ್ನು ಚೇತನ್ ಟೀಕಿಸಿದ್ದಾರೆ.
ವಿನೇಶ್ ಫೋಗಟ್ ಅನರ್ಹತೆಗೆ ಪ್ರಧಾನಿ ಮೋದಿ ಕಾರಣ ಎಂದು ಪ್ರಕಾಶ್ ರೈ ಪೋಸ್ಟ್ ಸಜೆಸ್ಟ್ ಮಾಡುತ್ತೆ. ಇದು ಸಣ್ಣತನ. ಭಾರತದ ಎಲ್ಲಾ ಲಾಭಗಳಿಗೆ ಮೋದಿಯನ್ನು ಕುರುಡಾಗಿ ಹೊಗಳುವವರು, ಹೇಗೆ ಅಜ್ಞಾನಿಗಳೋ, ಹಾಗೆಯೇ ಭಾರತದ ಎಲ್ಲಾ ಸಮಸ್ಯೆಗಳನ್ನು ಮೋದಿಯ ಮೇಲೆ ದೂಷಿಸುವ ರಾಯ್ ಅವರಂತಹವರೂ ಅಜ್ಞಾನಿಗಳಾಗಿದ್ದಾರೆ. ಪ್ರಕಾಶ್ ರೈ ಒಳ್ಳೆಯ ನಟ. ಆದರೆ, ಕೆಟ್ಟ ಹೋರಾಟಗಾರ ಎಂದು ಟೀಕಿಸಿದ್ದಾರೆ.
ಸದಾಕಾಲ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಲೇ ಬಂದಿದ್ದ ಚೇತನ್ ಅವರು, ಇದೀಗ ಇದ್ದಕ್ಕಿದ್ದಂತೆ ಮೋದಿ ಪರ ಬ್ಯಾಟಿಂಗ್ ಮಾಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಪ್ರಕಾಶ್ ರಾಜ್, ಕಾರ್ಟೂನ್ ವೊಂದನ್ನು ಶೇರ್ ಮಾಡಿದ್ದರು. ಈ ಕಾರ್ಟೂನ್ ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅವರು ತೂಕದ ಯಂತ್ರದ ಮೇಲೆ ನಿಂತಿದ್ದು, ಅವರ ಹಿಂಭಾಗದಲ್ಲಿ ಮತ್ತೊಬ್ಬರು ಕಾಲಿನ ಒಂದು ಬೆರಳನ್ನಿಟ್ಟು 100 ಗ್ರಾಂ ತೂಕ ಹೆಚ್ಚಾಗುವಂತೆ ಮಾಡುತ್ತಿರುವುದು ಕಂಡು ಬಂದಿತ್ತು. ಹಿಂದಿರುವ ವ್ಯಕ್ತಿ ಪ್ರಧಾನಿ ಮೋದಿ ಎಂದು ಚಿತ್ರ ಸೂಚಿಸುವಂತಿತ್ತು. ಮೋದಿಯೇ ವಿನೇಶ್ ಫೋಗಟ್ ಕುಸ್ತಿ ಚಿನ್ನದ ಪದಕದಿಂದ ವಂಚಿತರಾಗಲು ಕಾರಣವಾಗಿದ್ದಾರೆ ಎಂಬ ಅರ್ಥ ಬರುವ ಪೋಸ್ಟ್ ಶೇರ್ ಮಾಡಿದ್ದರು.
ಇದೀಗ ಇಬ್ಬರೂ ನಟರ ಪೋಸ್ಟ್ ವೈರಲ್ ಆಗುತ್ತಿದ್ದು, ಕೆಲವರು ಚೇತನ್ ಪರವಾಗಿ ನಿಂತಿದ್ದರೆ, ಮತ್ತೆ ಕೆಲವರು ಪ್ರಕಾಶ್ ರಾಜ್ ಪರ ಕಮೆಂಟ್ ಮಾಡುತ್ತಿದ್ದಾರೆ.