ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಎಚ್‌ ಬಿ ಪ್ರಭಾಕರ್‌ ಶಾಸ್ತ್ರಿ ಮತ್ತು ಅನಿಲ್‌ ಕೆ.ಕಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಕೆ ಇಸ್ಮಾಯಿಲ್‌ ಶಫಿ(ಆರೋಪಿ 9), ಕೆ ಮೊಹಮ್ಮದ್‌ ಇಕ್ಬಾಲ್‌(ಆರೋಪಿ 10) ಮತ್ತು ಎಂ ಶಾಹೀದ್‌(ಆರೋಪಿ 11) ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ತಿರಸ್ಕರಿಸಿದೆ.

ಆರೋಪಿಗಳು ಪ್ರಕರಣದಲ್ಲಿ ಸಕ್ರಿಯ ಪಾತ್ರ ವಹಿಸಿರುವುದನ್ನು ತೋರಿಸಲು ಸೂಕ್ತ ಸಾಕ್ಷ್ಯಧಾರಗಳು ಲಭ್ಯವಿದೆ. ಮೃತನ ಮೇಲೆ ದಾಳಿ ನಡೆದ ವೇಳೆ ಸ್ಥಳದಲ್ಲಿ ಈ ಮೂರು ಆರೋಪಿಗಳು ಭೌತಿಕವಾಗಿ ಹಾಜರಲಿಲ್ಲ. ಆದರೆ, ಪ್ರವೀಣ್‌ ನೆಟ್ಟಾರು ಹತ್ಯೆಗೆ ಯೋಜನೆ ರೂಪಿಸಲು ಹಮ್ಮಿಕೊಂಡಿದ್ದ ಸಂಚಿನ ಸಭೆಯಲ್ಲಿ ಭಾಗವಹಿಸಿದ್ದರು ಹಾಗೂ ಹತ್ಯೆ ಯೋಜನೆ ಬಗ್ಗೆ ಚರ್ಚಿಸಿದ್ದರು. ಸಂಚು ರೂಪಿಸಲು ಯಾವುದೇ ಬಹಿರಂಗ ಕ್ರಿಯೆಯನ್ನು ಮಾಡುವ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ನಾಲ್ವರು ಸಾಕ್ಷಿಗಳ ಹೇಳಿಕೆ ಪ್ರಕಾರ ಆರೋಪಿಗಳು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ತನಿಖಾಧಿಕಾರಿಗಳು ಸಂಗ್ರಹಿಸಿರುವ ಆರೋಪಿಗಳ ಪೋನ್‌ ಕರೆಗಳ ವಿವರಗಳು ಸಹ ಪ್ರಕರಣದಲ್ಲಿ ಮೇಲ್ಮನವಿದಾರ ಆರೋಪಿಗಳು ಪಿತೂರಿ ನಡೆಸುವುದನ್ನು ತೋರಿಸುತ್ತದೆ. ಆರೋಪಿಗಳು ಪ್ರಕರಣದಲ್ಲಿ ನಿರ್ದಿಷ್ಟ, ಸಕ್ರಿಯ ಮತ್ತು ಗಮನಾರ್ಹ ಪಾತ್ರ ನಿರ್ವಹಿಸುವುದನ್ನು ಮೇಲ್ನೋಟಕ್ಕೆ ದೃಢಪಡಿಸುವ ಸಾಕ್ಷ್ಯಗಳು ನ್ಯಾಯಾಲಯದ ಮುಂದಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಪ್ರವೀಣ್ ನೆಟ್ಟಾರು ಹತ್ಯೆ
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದ ಪ್ರವೀಣ್‌ ನೆಟ್ಟಾರು ಅವರು 2022ರ ಜುಲೈ 26ರಂದು ರಾತ್ರಿ 8.30ರ ವೇಳೆ ತಮ್ಮ ಚಿಕನ್ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗಲು ಅನುವಾಗುತ್ತಿದ್ದಾಗ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

Latest Indian news

Popular Stories