ಬಹುಭಾಷಾ ನಟಿ ಪ್ರಿಯಾಮಣಿ ಅವರು ಮುಸ್ಲಿಂ ಸಮುದಾಯದ ಮುಸ್ತಫಾ ರಾಜ್ ಎನ್ನುವವರ ಜೊತೆ ಮದುವೆಯಾಗಿದ್ದರ ಬಗ್ಗೆ ಸಾಕಷ್ಟು ನೆಗೆಟಿವ್ ಮಾತುಗಳು ಕೇಳಿಬಂದಿದ್ದವಂತೆ. ಇತ್ತೀಚೆಗೆ ಪರಭಾಷೆಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರಿನಲ್ಲೇ ನೆಲೆಸಿರುವ ಪ್ರಿಯಾಮಣಿ, 2017ರಲ್ಲಿ ತಾವು ಮೆಚ್ಚಿದ್ದ ಮುಸ್ತಫಾ ಎನ್ನುವವರ ಜೊತೆ ಬೆಂಗಳೂರಿನಲ್ಲಿ ರಿಜಿಸ್ಟರ್ ಮದುವೆಯಾದರು. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಮುಸ್ತಫಾ ಮತ್ತು ಪ್ರಿಯಾಮಣಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು.
ಮುಸ್ತಫಾ ಅವರಿಗೆ ಇದು ಎರಡನೇ ಮದುವೆ ಆಗಿದ್ದರಿಂದ ಮತ್ತಷ್ಟು ನೋವುಗಳನ್ನು ಅನುಭವಿಸಬೇಕಾದ ಪ್ರಸಂಗವೂ ಪ್ರಿಯಾಮಣಿ ಮುಂದಿತ್ತು. ಎಲ್ಲವನ್ನೂ ಎದುರಿಸಿಕೊಂಡೆ ಅವರೇ ಸಿನಿಮಾ ರಂಗದಲ್ಲಿ ಮುಂದುವರೆದರು.
ಇದೇ ಮೊದಲ ಬಾರಿಗೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ಪ್ರಿಯಾಮಣಿ, ‘ಭಾರತ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದನ್ನು ನೆನಪಿಸಿದ್ದಾರೆ. ಮುಸ್ಲಿಂ ಎಲ್ಲರನ್ನೂ ಉಗ್ರರು ಎನ್ನುವಂತೆ ನೋಡಲಾಗುತ್ತಿದೆ. ಅವರಿಗೆ ಹುಟ್ಟುವ ಮಕ್ಕಳು ಜಿಹಾದಿಗಳು ಆಗಿರಲ್ಲ. ಮುಸ್ಲಿಂ ಎಲ್ಲರೂ ಲವ್ ಜಿಹಾದ್ ಮಾಡಲ್ಲ ಎನ್ನುವುದನ್ನು ನೆನಪಿಸಿದ್ದಾರೆ.
ಅನ್ಯ ಧರ್ಮೀಯರನ್ನು ಇಷ್ಟಪಟ್ಟು ಮದುವೆ ಆಗುವುದೇ ತಪ್ಪು ಎನ್ನುವ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ನಾನು ಯಾರನ್ನು ಇಷ್ಟಪಟ್ಟೆನೋ ಅವರನ್ನು ಮದುವೆಯಾಗಿದ್ದೇನೆ. ಪ್ರೀತಿಯಲ್ಲಿ ಜಾತಿ, ಧರ್ಮಗಳು ಇರುವುದಿಲ್ಲ. ಬೇರೆ ಧರ್ಮ ಅಥವಾ ಜಾತಿಯವರನ್ನು ಮದುವೆಯಾದರೆ ಏನು ತಪ್ಪು?’ ಎಂದು ಪ್ರಶ್ನೆ ಮಾಡಿದ್ದಾರೆ ಪ್ರಿಯಾಮಣಿ.
ನಾನು ಮದುವೆಯಾಗುವಾಗ ಕೂಡ ಟ್ರೋಲ್‌ಗೆ ಒಳಗಾಗಿದ್ದೇನೆ. ನೀನು ಯಾಕೆ ನಿನ್ನ ಧರ್ಮದ ಹೊರಗಿನವರನ್ನು ಮದುವೆಯಾಗುತ್ತೀಯಾ? ಮದುವೆಯಾಗಬೇಡ, ಮದುವೆಯಾಗಿ ಮಕ್ಕಳು ಹುಟ್ಟಿದರೆ ಅವರಿಗೆ ಜಿಹಾದ್ ಪಟ್ಟ ಸಿಗುತ್ತದೆ ಅಂತ ಕೆಲವರು ಹೇಳಿದ್ದರು. ನಾನು ಪ್ರೀತಿ ಮಾಡಿದವರನ್ನು ಮದುವೆಯಾಗುತ್ತೇನೆ. ನಾನು ಪ್ರೀತಿಸಿದ ಹುಡುಗ ಬೇರೆ ಧರ್ಮದವನು, ಬೇರೆ ಜಾತಿಯವನಾದರೆ ಏನು ತಪ್ಪು? ” ಎಂದು ಪ್ರಿಯಾಮಣಿ ಪ್ರಶ್ನಿಸಿದ್ದಾರೆ.