ನಕಲಿ ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುತ್ತಿದ್ದ ಆರೋಪಿಗಳೊಂದಿಗೆ ಬಿಜೆಪಿಗೆ ನಂಟು: ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ

ಬೆಂಗಳೂರು: ಹೈದರಾಬಾದ್​ನಲ್ಲಿ ಮೈಸೂರು ಸ್ಯಾಂಡಲ್ ನಕಲಿ​ ಸಾಬೂನು ತಯಾರಿಕಾ ಘಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ರಾಕೇಶ್ ಜೈನ್, ಮಹಾವೀರ್ ಜೈನ್ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳು ಬಿಜೆಪಿಯ ಸಕ್ರಿಯ ಕಾರ್ಯಕರ್ತರು ಎಂದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಾರೆ‌

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ” ನಮ್ಮ ವಿಶ್ವ ವಿಖ್ಯಾತ ಮೈಸೂರು ಸ್ಯಾಂಡಲ್ ಸಾಬೂನಿನ ನಕಲಿ ಉತ್ಪನ್ನಗಳ ಮಾರಾಟದ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗಿದೆ. ಜನವರಿ ಮೊದಲ ವಾರದಲ್ಲಿ ಸಚಿವ ಎಂ.ಬಿ ಪಾಟೀಲ್ ಅವರಿಗೆ ಅನಾಮಿಕ ವ್ಯಕ್ತಿಯಿಂ ಕರೆ ಬರುತ್ತದೆ. ಅದರಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುತ್ತದೆ. ಕೂಡಲೇ ಸಚಿವರು ಕೆ.ಎಸ್.ಡಿ.ಎಲ್ ಎಂಡಿ ಪ್ರಶಾಂತ್ ಅವರಿಗೆ ಮಾಹಿತಿ ನೀಡುತ್ತಾರೆ.

ನಂತರ ಈ ಜಾಲದ ಹುಡುಕಾಟ ನಡೆದಿದ್ದು, ಇದು ಹೈದರಾಬಾದ್ ನಲ್ಲಿದೆ ಎಂದು ತಿಳಿಯುತ್ತದೆ. ಇದನ್ನು ಪರಿಶೀಲಿಸಲು ಕೆಲವು ಅಧಿಕಾರಿಗಳು ಹೈದರಾಬಾದ್ ತೆರಳಿ 25 ಲಕ್ಷ ರೂ. ಆರ್ಡರ್ ಇದೆ ಅಂತ ಹೇಳುತ್ತಾರೆ. ಅವರು ಇದನ್ನು ಪೂರೈಸುವುದಾಗಿ ಒಪ್ಪಿಕೊಳ್ಳುತ್ತಾರೆ. ಇದು ದೊಡ್ಡ ಮಟ್ಟದ ಆರ್ಡರ್ ಆಗಿರುವುದರಿಂದ ನಿಮ್ಮ ಕಾರ್ಖಾನೆಗೆ ಬಂದು ತೆಗೆದುಕೊಂಡು ಹೋಗುತ್ತೇವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಅದಕ್ಕೆ ಅವರೂ ಒಪ್ಪುತ್ತಾರೆ. ಈ ನಕಲಿ ಉತ್ಪಾದನಾ ಕಾರ್ಖಾನೆ ವಿಳಾಸ ತಿಳಿದ ತಕ್ಷಣ ದಾಳಿ ಮಾಡಿ ವಸ್ತುಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಕರಣದ ಸಂಬಂಧ ರಾಕೇಶ್ ಜೈನ್ ಹಾಗೂ ಮಹಾವೀರ್ ಜೈನ್ ಎಂಬ ಇಬ್ಬರು ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಾಗುತ್ತದೆ. ಇವರಿಬ್ಬರೂ ಪೊಲೀಸರ ವಶದಲ್ಲಿದ್ದಾರೆ. ಈ ವಿಚಾರಣೆ ನಡೆಸುವ ಸಂದರ್ಭ ಈ ಇಬ್ಬರು ವ್ಯಕ್ತಿಗಳು ಬಿಜೆಪಿಯ ಸಕ್ರಿಯ ಕಾರ್ಯಕರ್ತರು. ಇವರು ಯೋಗಿ ಆದಿತ್ಯನಾಥ್ ತೆಲಂಗಾಣ ಶಾಸಕ ರಾಜಾ ಸಿಂಗ್ ಅವರ ಒಡನಾಡಿಗಳಿದ್ದಾರೆ. ಇಷ್ಟೇಲ್ಲಾ ಒಡನಾಟ ಇಟ್ಟುಕೊಂಡಿರುವವರ ಜತೆ ರಾಜ್ಯ ಬಿಜೆಪಿ ನಾಯಕರು ಸಂಪರ್ಕ ಹೊಂದಿರುವುದಿಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್, ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರ ಪುತ್ರ ವಿಠಲ್ ನಾಯಕ್ ಜತೆ ಒಡನಾಟ ಇಟ್ಟುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Latest Indian news

Popular Stories