ಉಡುಪಿ: ಮಣಿಪುರದಲ್ಲಿ ಹಿಂಸಾಚಾರ, ಲೈಂಗಿಕ ದೌರ್ಜನ್ಯದ ವಿರುದ್ಧ ಉಡುಪಿಯಲ್ಲಿ ಸಮಾನ ಮನಸ್ಕ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು.
ಸಾವಿರಾರು ಮಂದಿ ಮಣಿಪುರದ ಹಿಂಸಾಚಾರ ಖಂಡಿಸಿ ಮದರ್ ಆಫ್ ಸಾರೋಸ್ ಚರ್ಚ್’ನಿಂದ ಸರ್ವಿಸ್ ಬಸ್ ಸ್ಟ್ಯಾಂಡ್ ಮಾರ್ಗವಾಗಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದವರೆಗೆ ಮೆರವಣಿಗೆ ನಡೆಸಿದರು.
ನಂತರ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಝೆನೇಟ್ ಬರ್ಬೋಝಾ, “ಬೊಲೊ ಭಾರತ್ ಮಾತಕಿ ಜೈ ಎಂದು ಪ್ರಧಾನಿ ನರೇಂದ್ರ ಮೋದಿಗಳು ಯಾವಾಗಲೂ ಹೇಳುತ್ತಿರುತ್ತಾರೆ. ನರೇಂದ್ರ ಮೋದಿಯವರೇ ಮಹಿಳೆಯರನ್ನು ನಗ್ನವಾಗಿ ನೆರವಣಿಗೆ ಮಾಡಿದ್ದಕ್ಕೆ ಭಾರತ್ ಮಾತಕಿ ಜೈ ಎಂದು ಕೂಗುವುದೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆಯಲ್ಲಿ ಬೆತ್ತಲಾದದ್ದು ಡಬಲ್ ಇಂಜಿನ್ ಸರಕಾರ. ಸರಕಾರಕ್ಕೆ ಮಾರಿಕೊಂಡ ಮಾಧ್ಯಮ ಬೆತ್ತಲಾಗಿದೆ ಎಂದರು.ಸುಳ್ಳನ್ನು ಅಗೆದು ಬಿತ್ತರಿಸುವ ಮಾಧ್ಯಮ ಮಣಿಪುರದ ಕುರಿತು ಮಾತನಾಡುತ್ತಿಲ್ಲ. ಪ್ರಿಂಟ್ ಮಾಧ್ಯಮ ಬಿಟ್ಟು ಎಲ್ಲವೂ ಮೌನವಾಗಿದೆ. ಅನೈತಿಕ ಸಂಬಂಧ ಇದ್ದರೆ ಬೆಳಿಗ್ಗೆಯಿಂದ ಸಂಜೆಯವರೆಗೆ ತೋರಿಸುವ ಮಾಧ್ಯಮಗಳಿಗೆ ಮಣಿಪುರದ ವಿಚಾರ ಬಿತ್ತರಿಸಲು ಸಾಧ್ಯವಾಗದೆ ಇರುವುದು ಖೇದಕರ.ಇಂತಹ ಅಮಾನುಷ ರೋಗಗ್ರಸ್ತ ಸಮಾಜಕ್ಕೆ ಅಡಿಪಾಯ ಹಾಕಿದ್ದು ಮಾಧ್ಯಮ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಪತಿಗಳು, ಸಂಸದರು ಮಹಿಳೆಯರಾಗಿ ಈ ಪ್ರಕರಣಗಳ ಕುರಿತು ಮಾತನಾಡಲಿಲ್ಲ. ಮನ್ ಕಿ ಬಾತ್ ಹೇಳುವ ಪ್ರಧಾನಿಗೆ ಆ ಹೆಣ್ಣು ಮಕ್ಕಳ ದಿಲ್ ಕಿ ಬಾತ್ ಕೇಳಲಿಲ್ಲ.ಬೇಟಿ ಬಚಾವೊ ಬೇಟಿ ಪಡಾವೊ ಕಾರ್ಯಕ್ರಮದ ಮುಕ್ತಾಯ ಬೇಟಿ ಜಲಾವೋ ಕಾರ್ಯಕ್ರಮವೇ ಎಂದು ಪ್ರಶ್ನಿಸಿದರು. ನಮ್ಮನ್ನು ಅತ್ಯಾಚಾರ, ಮಾಡಲು ದೌರ್ಜನ್ಯ ಮಾಡಲು ನಾವು ಅಗ್ಗದ ವಸ್ತುಗಳಲ್ಲ ಇಂತಹ ದೌರ್ಜನ್ಯದ ವಿರುದ್ಧ ಸಂಘಟಿತರಾಗಿ ಹೋರಾಟ ನಡೆಸುತ್ತೇವೆ ಎಂದರು.