ಒಪ್ಪಂದಕ್ಕೆ ನಾನಿನ್ನೂ ಸಹಿ ಹಾಕಿಲ್ಲ; ಕೋಚ್ ಅವಧಿ ವಿಸ್ತರಣೆ ಬಳಿಕ ದ್ರಾವಿಡ್ ಅಚ್ಚರಿ ಹೇಳಿಕೆ

2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ (ODI World Cup 2023) ಪಂದ್ಯದೊಂದಿಗೆ ರಾಹುಲ್ ದ್ರಾವಿಡ್ (Rahul Dravid) ಅವರ ಮುಖ್ಯ ಕೋಚ್ ಗುತ್ತಿಗೆ ಒಪ್ಪಂದ ಮುಕ್ತಾಯಗೊಂಡಿತ್ತು. ಆ ಬಳಿಕ ಐಪಿಎಲ್​ನಲ್ಲಿ (IPL 2023) ತಂಡವೊಂದರ ಮೆಂಟರ್ ಆಗಲಿದ್ದಾರೆ ಎಂದು ವರದಿಯಾಗಿತ್ತು. ಈ ಗಾಳಿ ಸುದ್ದಿಗಳ ನಡುವೆಯೇ ಹೆಡ್ ಕೋಚ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿಯ ಗುತ್ತಿಗೆಯನ್ನು ವಿಸ್ತರಿಸಿ ಬಿಸಿಸಿಐ (BCCI) ನ.29ರಂದು ಆದೇಶ ಹೊರಡಿಸಿತ್ತು.

ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಬೇಕೆಂಬ ದೃಷ್ಟಿಯಿಂದ ವಿಶ್ವಕಪ್​ ಫೈನಲ್​ ಬಳಿಕ ಭಾರತದ ಕೋಚ್ ಆಗಿ ಭವಿಷ್ಯದ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದ್ದರು. ಸದ್ಯ ದ್ರಾವಿಡ್ ಒಪ್ಪಂದದ ಅವಧಿ ನಿರ್ದಿಷ್ಟಪಡಿಸದಿದ್ದರೂ ಕನಿಷ್ಠ ಟಿ20 ವಿಶ್ವಕಪ್ 2024ರ ಅವಧಿಯವರೆಗೂ ಮುಂದುವರಿಯುವ ನಿರೀಕ್ಷೆ ಇದೆ. ಗುತ್ತಿಗೆ ಅವಧಿ ವಿಸ್ತರಿಸಿರುವ ಕುರಿತು ಅಧಿಕೃತವಾಗಿ ಬಿಸಿಸಿಐ ಆದೇಶ ಹೊರಡಿಸಿದರೂ ರಾಹುಲ್ ದ್ರಾವಿಡ್​ ಇನ್ನೂ ಸಹಿ ಹಾಕಿಲ್ಲ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡುವ ಮೂಲಕ ಅಚ್ಚರಿ ನೀಡಿದ್ದಾರೆ.

ಅಧಿಕೃತವಾಗಿ ನಾನು ಇನ್ನೂ ಯಾವುದಕ್ಕೂ ಸಹಿ ಹಾಕಿಲ್ಲ. ನಾನು ಬಿಸಿಸಿಐ ಜೊತೆ ಚರ್ಚೆ ನಡೆಸಿದ್ದೇನೆ ಎಂದು ದ್ರಾವಿಡ್ ದೆಹಲಿಯಲ್ಲಿ ನಡೆದ ಬಿಸಿಸಿಐ ಸಭೆಯ ಹೊರತಾಗಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡ ಪ್ರಕಟಿಸುವುದಕ್ಕೂ ಮುನ್ನ ಸುದ್ದಿಗಾರರಿಗೆ ತಿಳಿಸಿದರು. ಈ ಪ್ರವಾಸದಲ್ಲಿ ಭಾರತ ತಲಾ ಮೂರು ಟಿ20 ಮತ್ತು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ರಾಹುಲ್ ದ್ರಾವಿಡ್ ನೀಡಿದ ಈ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಯಾವುದೂ ಅಧಿಕೃತಗೊಂಡಿಲ್ಲ. ಯಾವುದೇ ಒಪ್ಪಂದಕ್ಕೆ ನಾನಿನ್ನೂ ಸಹಿ ಹಾಕಿಲ್ಲ. ಒಪ್ಪಂದ ಪತ್ರ ಸಿಕ್ಕಿದ ಬಳಿಕವೇ ಚರ್ಚೆ ನಡೆಸುತ್ತೇನೆ ಎಂದು ಜ್ಯಾಮಿ ಹೇಳಿದ್ದಾರೆ. ಅಲ್ಲಿಯವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಗೊಂದಲಗಳಿಗೆ ದ್ರಾವಿಡ್ ಸ್ಪಷ್ಟನೆ ನೀಡಿದ್ದಾರೆ. ದ್ರಾವಿಡ್ ಗುರುವಾರ ವಿಶ್ವಕಪ್ ಮತ್ತು ಒಪ್ಪಂದ ಪರಿಶೀಲನಾ ಸಭೆಯ ನಂತರ ಪತ್ರಕರ್ತರಿಗೆ ತಿಳಿಸಿದರು. 2024ರ ಟಿ20 ವಿಶ್ವಕಪ್​ವರೆಗೆ ದ್ರಾವಿಡ್ ಕೋಚ್ ಆಗಿ ಮುಂದವರಿಸಲು ಬಿಸಿಸಿಐ ಆಸಕ್ತಿ ತೋರಿದೆ.

Latest Indian news

Popular Stories