ಪ್ರಜ್ವಲ್ ರೇವಣ್ಣದ್ದು ಮಾಸ್ ರೇಪ್ ಪ್ರಕರಣ | ಅವರ ಕೃತ್ಯ ಮೋದಿ ಹಾಗೂ ಎಲ್ಲ ಬಿಜೆಪಿ ಮುಖಂಡರಿಗೆ ಗೊತ್ತಿದ್ದೂ ಜೆ.ಡಿ.ಎಸ್ ಜೊತೆ ಸೇರಿ ಮತಯಾಚಿಸಿದರು – ರಾಹುಲ್ ಗಾಂಧಿ ವಾಗ್ದಾಳಿ

ಶಿವಮೊಗ್ಗ /ರಾಯಚೂರು: ಪ್ರಜ್ವಲ್‌ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ದ್ದಾರೆ. ಇದು ಲೈಂಗಿಕ ಹಗರಣ ಅಲ್ಲ. ಮಾಸ್‌ ರೇಪ್‌ ಪ್ರಕರಣವಾಗಿದೆ. ಈ ಪ್ರಕರಣ ಬಯಲಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬರಲು ಹೆದರಿದ್ದಾರೆ. ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿಕೊಂಡಿದ್ದಾರೆ ಎಂದು ಎಐಸಿಸಿ ಮುಖಂಡ  ರಾಹುಲ್‌ ಗಾಂಧಿ  ಹೇಳಿದರು.

ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ಗುರುವಾರ ಕಾಂಗ್ರೆಸ್‌ ಆಯೋಜಿಸಿದ್ದ  “ಪ್ರಜಾಧ್ವನಿ ಯಾತ್ರೆ-2′ ಸಮಾವೇಶದಲ್ಲಿ  ಮಾತನಾಡಿದ ಅವರು, ಒಬ್ಬ ಮಾಸ್‌ ರೇಪಿಸ್ಟ್‌ ಜತೆಗಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಪ್ರಜ್ವಲ್‌ ಮಾಡಿದ್ದ ಕೃತ್ಯ ಏನು ಎಂಬುದು ಮೋದಿ ಹಾಗೆಯೇ ಬಿಜೆಪಿಯ ಪ್ರತಿಯೊಬ್ಬ ಮುಖಂಡರಿಗೆ ಗೊತ್ತಿತ್ತು. ಆದರೂ ಅವರು ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಮತಯಾಚಿಸಿದರು. ಆ ಮೂಲಕ ಹಿಂದೂಸ್ಥಾನದ ಪ್ರತಿಯೊಬ್ಬ ಮಹಿಳೆಯನ್ನು ಮೋದಿಯವರು ಅವಮಾನಿಸಿದ್ದಾರೆ. ಈ ಕಾರಣಕ್ಕೆ ಮೋದಿ, ಅಮಿತ್‌ ಶಾ ಹಾಗೂ ಬಿಜೆಪಿ ಮುಖಂಡರು ದೇಶದ ಮಹಿಳೆಯರ ಎದುರು ಕೈ ಮುಗಿದು ಕ್ಷಮೆ ಕೇಳಬೇಕಿದೆ. ಜಗತ್ತಿನಲ್ಲಿ ಇಂತಹ ಕೃತ್ಯವನ್ನು ಇನ್ಯಾರೂ ಎಸಗಿಲ್ಲ ಎಂದು ಕಿಡಿಕಾರಿದರು.ದೇಶವನ್ನು ಯಾರು ನಡೆಸುತ್ತಿದ್ದಾರೋ ಅವರೇ ಪ್ರಜ್ವಲ್‌ರನ್ನು ರಕ್ಷಿಸುತ್ತಿದ್ದಾರೆ. ರಾಜ್ಯದ ಬಿಜೆಪಿ ನಾಯಕರೊಬ್ಬರು ಕೇಂದ್ರ ಗೃಹ ಸಚಿವರಿಗೆ ಪ್ರಜ್ವಲ್‌ ಕರ್ಮಕಾಂಡದ ಕುರಿತು ಪತ್ರ ಬರೆದು ಎಚ್ಚರಿಸಿದ್ದರು. ಆದರೆ ಅಮಿತ್‌ ಶಾ ಈ ಬಗ್ಗೆ ಏನೂ ಮಾತನಾಡಲಿಲ್ಲ. ಪ್ರಜ್ವಲ್‌ ಬಗ್ಗೆ ಎಲ್ಲ ಗೊತ್ತಿದ್ದರೂ ಯಾಕೆ ರಕ್ಷಣೆ ಮಾಡುತ್ತಿದ್ದೀರಿ, ವಿದೇಶಕ್ಕೆ ಹೋಗಲು ಯಾಕೆ ಬಿಟ್ಟಿರಿ ಎಂಬುದನ್ನು ಅವರು ಹೇಳಬೇಕಿದೆ ಎಂದರು.

ಜೆಡಿಎಸ್‌ ಸಖ್ಯಕ್ಕೋಸ್ಕರ ಪ್ರಜ್ವಲ್‌ ರಕ್ಷಣೆ ಮಾಡಿ ದ್ದೀರಾ ಎಂದು ಪ್ರಶ್ನಿಸಿದ ರಾಹುಲ್‌, ಬಿಜೆಪಿ ನಾಯಕ ರಲ್ಲಿ ಮಹಿಳೆಯರ ನೋವಿಗೆ, ಸಂಕಷ್ಟಕ್ಕೆ ಕೊಂಚವೂ ಮರುಕವಿಲ್ಲ. ಪ್ರಧಾನಿ ರಾಜ್ಯಕ್ಕೆ ಬಂದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಪ್ರಜ್ವಲ್‌ ರೇವಣ್ಣ 400 ಜನ ಮಹಿಳೆಯರ ಮೇಲೆ ಬಲಾತ್ಕಾರ ಮಾಡಿದ್ದಾರೆ. ಅಲ್ಲದೆ, ಮಹಿಳೆಯರ ವೀಡಿಯೋ ಮಾಡಿದ್ದಾರೆ. 16 ವರ್ಷದ ಬಾಲಕಿಯರ ಮೇಲೂ ಬಲಾತ್ಕಾರ ಮಾಡಲಾಗಿದೆ. ಇಷ್ಟೆಲ್ಲ ಗೊತ್ತಿದ್ದರೂ ಗೃಹ ಸಚಿವ ಅಮಿತ್‌ ಶಾ ಮೌನ ವಹಿಸಿರುವುದು ಅಕ್ಷಮ್ಯ. ಅವರ ವಿರುದ್ಧವೇ ಪ್ರಕರಣ ದಾಖಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಹಿಳೆಯರ ಮೇಲಿನ ಅತ್ಯಾಚಾರಿಯನ್ನು ದೇಶದಿಂದ ಹೊರಕ್ಕೆ ಹೋಗಲು ಪ್ರಧಾನಿ  ಅವಕಾಶ ಮಾಡಿಕೊಟ್ಟರು. ತನಿಖಾ ಸಂಸ್ಥೆಗಳು ಕೂಡ ಮಾಸ್‌ ರೇಪಿಸ್ಟ್‌ ಜರ್ಮನಿಗೆ ಹೋಗುವುದನ್ನು ತಡೆಯಲಿಲ್ಲ. ಇದು ಮೋದಿ ಗ್ಯಾರಂಟಿಯಾಗಿದೆ. ಬಿಜೆಪಿ ಮಾಸ್‌ ರೇಪಿಸ್ಟ್‌ ಪರವಾಗಿದೆ. -ರಾಹುಲ್‌ ಗಾಂಧಿ, ಎಐಸಿಸಿ ನಾಯಕ

Latest Indian news

Popular Stories