ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿದು 17 ಕಾರ್ಮಿಕರು ಮೃತ್ಯು

ಐಜ್ವಾಲ್: ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಸೇತುವೆ ಕುಸಿದು ಬಿದ್ದ ಪರಿಣಾಮ ಕನಿಷ್ಠ 17 ಕಾರ್ಮಿಕರು ಮೃತಪಟ್ಟ ಘಟನೆ ಮಿಜೋರಾಂ ರಾಜ್ಯದಲ್ಲಿ ಬುಧವಾರ ನಡೆದಿದೆ.

“ಸೇತುವೆ ಕುಸಿದು ಬಿದ್ದಾಗ ಸ್ಥಳದಲ್ಲಿ ಸುಮಾರು 35ರಿಂದ 40 ಜನರು ಕೆಲಸ ಮಾಡುತ್ತಿದ್ದರು. ಹೀಗಾಗಿ ಹಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಿಜೋರಾಂ ರಾಜಧಾನಿ ಐಜ್ವಾಲ್ ನಿಂದ ಸುಮಾರು 21 ಕಿ.ಮೀ ದೂರದಲ್ಲಿರುವ ಸಾಯಿರಾಂಗ್ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ.

ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ ಹಾಗೂ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ.

ಮಿಜೋರಾಂ ಮುಖ್ಯಮಂತ್ರಿ ಜೋರಾಂತಗ್ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.

“ಐಜ್ವಾಲ್ ಬಳಿಯ ಸಾಯಿರಾಂಗ್‌ ನಲ್ಲಿ ನಿರ್ಮಾಣ ಹಂತದ ರೈಲ್ವೆ ಮೇಲ್ಸೇತುವೆ ಇಂದು ಕುಸಿದು ಕನಿಷ್ಠ 17 ಕಾರ್ಮಿಕರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ನಾನು ಎಲ್ಲಾ ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಜನರಿಗೆ ಕೃತಜ್ಞತೆ ಹೇಳುತ್ತಿದ್ದೇನೆ” ಎಂದು ಎಕ್ಸ್ ಸಾಮಾಜಿಕ ವೇದಿಕೆಯಲ್ಲಿ ಹೇಳಿದ್ದಾರೆ.

Latest Indian news

Popular Stories