
ಕಲ್ಲಡ್ಕ ಭಟ್ ಬಂಧನವಾದರೆ ಅಹಿತಕರ ಘಟನೆ ನಡೆಯಲ್ಲ: ರಮಾನಾಥ ರೈ
ಮಂಗಳೂರು: ಕಲ್ಲಡ್ಕ ಪ್ರಭಾಕರ ಭಟ್ ಬಂಧನವಾದರೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಕೋಮು ಸಂಘರ್ಷ ನಡೆಯುದಿಲ್ಲ. ಯಾಕೆಂದರೆ ಇಂತಹ ಘಟನೆಗಳನ್ನು ತಡೆಯಲು ಪೋಲೀಸ್ ಇಲಾಖೆ ಸಿದ್ಧವಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆದ ದ.ಕ.ಜಿಲ್ಲಾ ಜಾತ್ಯಾತೀತ ಪಕ್ಷಗಳ ಸಂಘಟನೆಗಳ ಜಂಟಿ ವೇದಿಕೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಟ್ ಬಂಧನಾದರೆ ಅಹಿತಕರ ಘಟನೆ ನಡೆಯುವಂತಹ ಸ್ಥಿತಿ ಸದ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ಇಡೀ ಮಹಿಳಾ ಸಮಾಜಕ್ಕೆ ಮಾಡಿದ ಅವಮಾನ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹತಾಶವಾಗಿರುವ ಬಿಜೆಪಿ ಈ ರೀತಿಯ ಕೋಮು ಪ್ರಚೋದಕ ಹೇಳಿಕೆಗಳನ್ನು ನೀಡಿಸುತ್ತಿದೆ ಎಂದು ರೈ ಹೇಳಿದರು.
ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಈಗಾಗಲೇ ಜಾಮೀನು ರಹಿತ ಪ್ರಕರಣ ದಾಖಲೆಯಾಗಿದೆ. ಸರಕಾರ ತಕ್ಷಣ ಕಲ್ಲಡ್ಕ ಪ್ರಭಾಕರ್ ಭಟ್ ರನ್ನು ಬಂಧನ ಮಾಡಬೇಕು. ಸರ್ಕಾರ ಈ ವಿಚಾರದಲ್ಲಿ ವಿಳಂಬ ಮಾಡಬಾರದು ಎಂದು ಬಿ.ರಮಾನಾಥ್ ರೈ ಹೇಳಿದರು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಎಂನ ಯಾದವ ಶೆಟ್ಟಿ, ಎಂಜಿ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.




