ವಿಜಯಪುರ: ಹೊಸಬರಿಗೆ ಟಿಕೆಟ್ ಕೊಡಿ ಎಂದು ಬಿಜೆಪಿ ಹೈಕಮಾಂಡ್‌ಗೆ ಯಾರು ಐಡಿಯಾ ಕೊಟ್ಟಿದ್ದಾರೋ ಗೊತ್ತಿಲ್ಲ. ಅವರನ್ನು ನೇಣಿಗೆ ಬೇಕಾದರೂ ಹಾಕಿ, ಕಾಲನ್ನಾದರೂ ಕಡಿಯಿರಿ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 70ಕ್ಕೂ ಹೆಚ್ಚು ಜನ ಹೊಸಬರಿಗೆ ಟಿಕೆಟ್ ನೀಡಲಾಗಿತ್ತು. ಅದರಲ್ಲಿ ಗೆದ್ದವರು ಬೆರಳಣಿಕೆಯಷ್ಟು ಜನ ಮಾತ್ರ.
ಹಿರಿಯರಿಗೆ ಟಿಕೆಟ್ ಕೊಟ್ಟಿದ್ದರೆ ಎಲ್ಲರೂ ಗೆಲ್ಲುತ್ತಿದ್ದರು. ಆಗ 130ಕ್ಕೂ ಹೆಚ್ಚು ಸೀಟ್‌ಗಳಲ್ಲಿ ಬಿಜೆಪಿ ಗೆದ್ದು ಬಹುಮತ ಸಾಧಿಸುತ್ತಿತ್ತು. ಹೊಸಬರಿಗೆ ಬಿಜೆಪಿ ಟಿಕೆಟ್ ಕೊಡುವ ಔಚಿತ್ಯ ಇರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಅದರಲ್ಲೂ ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾದ ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರು ಪಕ್ಷ ಬಿಟ್ಟು ಹೋಗಿರುವುದು, ಕಾಂಗ್ರೆಸ್‌ನ ಗ್ಯಾರಂಟಿ ಅಬ್ಬರದ ಪರಿಣಾಮ ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.
ಆದರೆ, ಕಾಂಗ್ರೆಸ್‌ನ ಗ್ಯಾರಂಟಿ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ. ಆ ಹುಡುಗ, ಆ ಹುಡುಗಿ ಅವರೇನು ನಾಯಕರೇ ಎಂದು ಪರೋಕ್ಷವಾಗಿ ರಾಹುಲ್, ಪ್ರಿಯಾಂಕಾ ಗಾಂಧಿ ವಿರುದ್ಧ ಜಗಜಿಣಗಿ ವ್ಯಂಗ್ಯವಾಡಿದರು.