ಅಕ್ರಮ ಮರಳುಗಾರಿಕೆ ತಡೆಗೆ ಆಗ್ರಹಿಸಿ ಮನವಿ

ವಿಜಯಪುರ: ಅಕ್ರಮ ಮರಳುಗಾರಿಕೆ ತಡೆಗಟ್ಟುವುದು, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮೂಲಸೌಕರ್ಯ ಒದಗಿಸಿ ಬಲ ತುಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಆರ್‌ಎಸ್ ಪಕ್ಷದ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಗಣಿ-ಭೂಗರ್ಭ ಸಚಿವರು ಹಾಗೂ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವ್ಯಾಪಕವಾಗಿದೆ, ಇದರಿಂದ ನೈಸರ್ಗಿಕ ಸಂಪನ್ಮೂಲ ಬರಿದಾಗುತ್ತಿದೆ, ಸರ್ಕಾರದ ಬೊಕ್ಕಸಕ್ಕೂ ಅಪಾರ ಹಣ ಹರಿದು ಬರುವುದು ತಪ್ಪುತ್ತಿದೆ, ಒಂದು ರೀತಿ ಈ ಸೋರಿಕೆಯಿಂದ ಜಿಲ್ಲೆಗೆ ದೊಡ್ಡ ಅನ್ಯಾಯವಾಗುತ್ತಿದೆ ಎಂದರು.
ವಿಜಯಪುರ ಜಿಲ್ಲೆಯಲ್ಲಿ ವ್ಯಾಪಕವಾಗಿ ಅಕ್ರಮ ಮರಳುಗಾರಿಕೆ ಗಣಿಗಾರಿಕೆ ನಡೆಯುತ್ತಿದ್ದು. ವಿಜಯಪುರ ಜಿಲ್ಲೆ 13 ತಾಲೂಕುಗಳಲ್ಲಿ ದೊಡ್ಡ ಜಿಲ್ಲೆಯಾಗಿದ್ದು ಜಿಲ್ಲೆಯಲ್ಲಿ ನಾಮಕಾವಸ್ಥೆ ಇಲಾಖೆಯಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇರುತ್ತದೆ. ಇಲಾಖೆಗೆ ಕಚೇರಿ ಸೇರಿದಂತೆ ಸಿಬ್ಬಂದಿಗಳ ಕೊರತೆ ವಾಹನಗಳ ಕೊರತೆ ವ್ಯಾಪಕ ಭ್ರಷ್ಟಾಚಾರದಿಂದ ಕೂಡಿದ ಇಲಾಖೆಯಾಗಿ ಪರಿವರ್ತನೆ ಆಗುತ್ತಿರುವುದು ಖೇದಕರ ಸಂಗತಿ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಅತಿಯಾದ ಮರಳುಗಾರಿಕೆ ಜಲ್ಲಿಗಾರಿಕೆ ಗಣಿಗಾರಿಕೆ ವ್ಯಾಪಕವಾಗಿ ನಡೆದು ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟವನ್ನು ಉಂಟಾಗುತ್ತಿದೆ ಹೀಗಾಗಿ ಮಾನ್ಯರು ತಕ್ಷಣಕ್ಕೆ ಕ್ರಮ ಕೈಗೊಂಡು ಸಿಬ್ಬಂದಿಗಳ ನೇಮಕಾತಿ ಮಾಡಿ ಸೂಕ್ತ ವಾಹನಗಳನ್ನು ಒದಗಿಸಿ ಭ್ರಷ್ಟಾಚಾರ ಮುಕ್ತ ಸೇವೆಯನ್ನು ನೀಡುವಂತೆ ಆಗ್ರಹಿಸಲಾಯತು.
ಸಂಘಟನೆ ಪ್ರಮುಖರಾದ ರಾಕೇಶ ಇಂಗಳಗಿ, ಹಮೀದ ಇನಾಮದಾರ, ಪ್ರವೀಣ ಕನಸೆ, ವಿಕ್ರಮ ವಾಗ್ಮೊರೆ, ಶ್ರೀಶೈಲ ಮಠ ಉಪಸ್ಥಿತರಿದ್ದರು.




