ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ: ವ್ರಾಂಗ್ ಸೈಡ್’ನಲ್ಲಿ ಹೆದ್ದಾರಿ ಕ್ರಾಸ್ ಮಾಡಬೇಕಾದ ಅನಿವಾರ್ಯತೆ – ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ಉಡುಪಿ: ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66 ರ ಒವರ್ ಪಾಸ್ ನಿರ್ಮಾಣ ಕಾರ್ಯದ ನಿಧನಗತಿಯಿಂದಾಗಿ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದು ಇದೀಗ ಅಂಡರ್ ಪಾಸ್ ನ ಅಪೂರ್ಣ ಕಾಮಗಾರಿಯಲ್ಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ಒಂದು ಬದಿಯಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

ನಿಧನಗತಿಯ ಕಾಮಗಾರಿಯಿಂದ ಸಾರ್ವಜನಿಕರು ದಿನ ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಸಂತೆಕಟ್ಟೆಯಿಂದ ಉಡುಪಿ ಕಡೆ ಸಾಗುವ ವಾಹನಗಳು ಸರ್ವಿಸ್ ರೋಡ್’ನಲ್ಲಿ ಸಂಚರಿಸಿ ಇಂಡಿಯನ್ ಒಯಿಲ್ ಪೆಟ್ರೋಲ್ ಬಂಕ್ ಬಳಿ ತಾತ್ಕಾಲಿಕವಾಗಿ ತೆರೆದಿರುವ ಕ್ರಾಸಿಂಗ್’ನಲ್ಲಿ “ವ್ರಾಂಗ್ ಸೈಡ್” ನಲ್ಲಿ ಕ್ರಾಸಿಂಗ್” ಮಾಡಿ ಉಡುಪಿಯತ್ತ ಸಾಗುವ ಹೆದ್ದಾರಿಯಲ್ಲಿ ಸಂಚರಿಸುವ ಅನಿವಾರ್ಯತೆ ಉಂಟಾಗಿದೆ.

ಈ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಬರುವ ವಾಹನಗಳು ಅತೀ ವೇಗದಿಂದ ಸಂಚರಿಸುವ ಕಾರಣ ಅಪಘಾತದ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಇನ್ನು ರಾಷ್ಟ್ರೀಯ ಹೆದ್ದಾರಿಯ ನಡುವೆ ಕ್ರಾಸಿಂಗ್ ಮಾಡಬೇಕಾಗಿರುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಕೂಡ ತಲೆದೋರುತ್ತಿದೆ. ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಇನ್ನು ಕೆಲವೇ ದಿನದಲ್ಲಿ ಮಳೆಗಾಲವು ಸಮೀಪಿಸಲಿರುವುದರಿಂದ ಮತ್ತಷ್ಟು ಸಮಸ್ಯೆ ಬಿಗಾಡಯಿಸುವ ಸಾಧ್ಯತೆ ಇದೆ. ಉಡುಪಿಯಿಂದ ಬರುವಾಗ ಎಡ ಬದಿಯಲ್ಲಿ ಸಿಗುವ ಸರ್ವಿಸ್ ರೋಡಿನ ಒಂದು ಭಾಗದಲ್ಲಿ ಡಿವೈಡರ್ ಒಡೆದು ರಸ್ತೆ ಅಗಲೀಕರಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಸೂಕ್ತ ಡಾಂಬರೀಕರಣ ಮಾಡದೆ ಹಳೆ ರಸ್ತೆಯ ಡಂಬಾರೀನ ಅವಶೇಷ ತಂದು ಸಮತಟ್ಟು ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಇದೀಗ ಅದರಲ್ಲಿ ಸಂಚರಿಸುವುದು ಕೂಡ ಅಸಾಧ್ಯವೆನಿಸಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಸರ್ವಿಸ್ ರೋಡ್’ಗೆ ಬರುವ ವಾಹನಗಳಿಗೆ “ಸೈಡ್” ನೀಡಲು ಹೋಗಿ ಈ ಅಂಕುಡೊಂಕಾದ ರಸ್ತೆಯಲ್ಲಿ ಸಂಚರಿಸುವುದು ಅನಿವಾರ್ಯತೆಯಾಗುತ್ತದೆ ಅಂತಹ ಸಂದರ್ಭದಲ್ಲಿ ವಾಹನ ಸವಾರರು ಅನುಭವಿಸುವ ಸಮಸ್ಯೆ ಅಷ್ಟಿಷ್ಟಲ್ಲ. ವಾಹನ ಕೆಡುವುದರೊಂದಿಗೆ ರೋಗಿಗಳಿದ್ದಲ್ಲಿ ಮತ್ತಷ್ಟು ಸಮಸ್ಯೆಗೆ ಈಡಾಗುತ್ತಾರೆ.

ಇನ್ನು ಈ ಪರಿಸರದಲ್ಲಿ ಹಲವು ಶಾಲಾ-ಕಾಲೇಜುಗಳಿರುವುದರಿಂದ ವಿದ್ಯಾರ್ಥಿಗಳಿಗೆ ನಿತ್ಯ ಸಮಸ್ಯೆಯಾಗಿದೆ. ವ್ಯಾಪಾರ ವಹಿವಾಟುಗಳ ಮೇಲೂ ಗಂಭೀರ ಸ್ವರೂಪದ ಪರಿಣಾಮ ಬೀರಿದ್ದು ಹಲವು ಅಂಗಡಿಗಳು ವ್ಯಾಪಾರವಿಲ್ಲದೆ ಅರ್ಥಿಕ ಸಂಕಷ್ಟಕ್ಕಿಡಾಗಿದೆ.

ಈಗಾಗಲೇ ನಾಗರಿಕ ಹಿತ ರಕ್ಷಣೆಯವರು ಈ ಕುರಿತು ಪ್ರತಿಭಟಿಸಿ ಆದಷ್ಟು ಶೀಘ್ರವಾಗಿ ಕಾಮಗಾರಿ ಮುಕ್ತಾಯಗೊಳಿಸಲು ಆಗ್ರಹಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅದಷ್ಟೂ ಶೀಘ್ರ ಕಾಮಗಾರಿ ಪೂರ್ಣಗೊಳ್ಳುವ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ.

Latest Indian news

Popular Stories