Featured StoryNational

ಎಸ್‌ಎಫ್‌ಐ ವಿರುದ್ಧ ರಸ್ತೆಯಲ್ಲೇ ಧರಣಿ ಕುಳಿತ ಕೇರಳ ರಾಜ್ಯಪಾಲರು

ಕೇರಳದಲ್ಲಿ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ತೀವ್ರಗೊಂಡ ಆಕ್ರೋಶ | ರಾಜ್ಯಪಾಲರ ಭದ್ರತೆ ಹೆಚ್ಚಳ

ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಎಡ ವಿದ್ಯಾರ್ಥಿ ಸಂಘಟನೆಯಾದ ಎಸ್‌ಎಫ್‌ಐ (ಸ್ಟುಡೆಂಟ್ ಫೆಡರೇಶನ್ ಆಫ್ ಇಂಡಿಯಾ) ಸಂಘರ್ಷ ಮತ್ತೆ ತಾರಕಕ್ಕೇರಿದ್ದು, ಈ ನಿಟ್ಟಿನಲ್ಲಿ ರಾಜ್ಯಪಾಲರ ಭದ್ರತೆಯನ್ನು ಹೆಚ್ಚಳಗೊಳಿಸಿ ಕೇಂದ್ರ ಗಹ ಇಲಾಖೆ ಆದೇಶಿಸಿದೆ.

ಶನಿವಾರ ಕೊಲ್ಲಂ ಜಿಲ್ಲೆಯ ನೀಲಮೇಲ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್‌ಗೆ ಎಸ್‌ಎಫ್‌ಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ‘ಸಂಘಿ ಚಾನ್ಸಲರ್ ಗೋ ಬ್ಯಾಕ್’ ಎಂದು ಪ್ರತಿಭಟನೆ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ರಾಜ್ಯಪಾಲರು ಕಾರಿನಿಂದ ಇಳಿದು ಪ್ರತಿಭಟನಕಾರರ ಬಳಿ ತೆರಳಿ ‘ಹತ್ತಿರ ಬನ್ನಿ’ ಎಂದು ಸವಾಲು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಪ್ರತಿಭಟನಕಾರರ ವಿರುದ್ಧ ಆಕ್ರೋಶದಿಂದ ಅಲ್ಲೇ ಕುಳಿತು ಧರಣಿ ನಡೆಸಿದ್ದರು. ಸುರಕ್ಷೆ ಅಧಿಕಾರಿಗಳು, ಕೇರಳ ಪೊಲೀಸರು ಎಷ್ಟೇ ವಿನಂತಿಸಿದ್ದರೂ ಆರಿಫ್ ಮೊಹಮ್ಮದ್ ಖಾನ್ ಅಲ್ಲಿಂದ ಕದಲಲಿಲ್ಲ. ಅಲ್ಲದೇ ಪ್ರತಿಭಟನಕಾರರು ವಿದ್ಯಾರ್ಥಿಗಳಲ್ಲಿ, ಅವರು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಕಳುಹಿಸಿದ ಗೂಂಡಾಗಳು ಎಂದು ಕೇರಳ ಮುಖ್ಯಮಂತ್ರಿ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದರು.
ಸುಮಾರು ಎರಡು ಗಂಟೆಗಳ ಕಾಲ ಧರಣಿ ಕುಳಿತ ರಾಜ್ಯಪಾಲರು, ಪ್ರತಿಭಟನಕಾರರ ಮೇಲೆ ದಾಖಲಾದ ಎಫ್‌ಐಆರ್ ಕಾಪಿಯನ್ನು ತೋರಿಸಿದ ಬಳಿಕ ಧರಣಿ ಕೈ ಬಿಟ್ಟು ತೆರಳಿದರು.
ಒಟ್ಟು 17 ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು.
ಈ ನಡುವೆ ರಾಜ್ಯಪಾಲರ ಝೆಡ್ ಭದ್ರತೆ ಹೆಚ್ಚಿಸಿ ಕೇಂದ್ರ ಗಹ ಇಲಾಖೆ ರಾಜಭವನಕ್ಕೆ ಸೂಚನೆ ಕಳುಹಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button