ಕೇರಳ: ಮುಂದುವರಿದ ಗವರ್ನರ್-ಎಸ್‌ಎಫ್‌ಐ ಸಂಘರ್ಷ

ತಿರುವನಂತಪುರಂ: ಕ್ಯಾಲಿಕಟ್ ವಿಶ್ವವಿದ್ಯಾಲಯಕ್ಕೆ ಅಕ್ರಮ ನೇಮಕಾತಿ ಮಾಡಲಾಗಿದೆಯೆಂದು ಆರೋಪಿಸಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧದ ಎಸ್‌ಎಫ್‌ಐ (ಸ್ಟುಡೆಂಟ್ ಫೆಡರೇಶನ್ ಆಫ್ ಇಂಡಿಯಾ) ಪ್ರತಿಭಟನೆ ತಾರಕಕ್ಕೇರಿದೆ.

ಸೋಮವಾರ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಗಾರಕ್ಕೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಉದ್ಘಾಟಕರಾಗಿದ್ದರು. ಆದರೆ ಅವರನ್ನು ವಿಶ್ವವಿದ್ಯಾನಿಲಯಕ್ಕೆ ಬರಲು ಬಿಡುವುದಿಲ್ಲ ಎಂದು ಎಡ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಘೋಷಿಸಿತ್ತು. ಆದರೆ ಆರಿಫ್ ಮೊಹಮ್ಮದ್ ಖಾನ್ ಕೋಝಿಕೋಡ್‌ಗೆ ಆಗಮಿಸಿದ್ದು, ಅಲ್ಲಿನ ಮಾರ್ಕೇಟ್‌ನಲ್ಲಿ ಸುಮಾರು 1 ಗಂಟೆ ಬಹಿರಂಗವಾಗಿ ಕಳೆದಿದ್ದರು. ಇದು ಎಸ್‌ಎಫ್‌ಐಗೆ ಸವಾಲು ಎಸೆದಂತಿತ್ತು. ಈ ನಡುವೆ ಕ್ಯಾಂಪಸ್ ಬಳಿ ಎಸ್‌ಎಫ್‌ಐ ಕಾರ್ಯಕರ್ತರು ತೀವ್ರ ಪ್ರತಿಭಟನೆಯನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕ್ಯಾಂಪಸ್‌ನಲ್ಲಿ ಬಿಗಿ ಪೊಲೀಸ ಭದ್ರತೆಯನ್ನು ಒದಗಿಸಲಾಗಿತ್ತು. ಈ ಭದ್ರತೆಯನ್ನೂ ಮೀರಿ ಎಸ್‌ಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಈ ಎಲ್ಲಾ ಘಟನೆಗಳಿಂದ ರಾಜ್ಯಪಾಲರು ಆಕ್ರೋಶಿತರಾಗಿದ್ದು, ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆ ಅಲ್ಲ; ಕ್ರಿಮಿನಲ್‌ಗಳನ್ನೊಳಗೊಂಡ ಗೂಂಡಾ ಸಂಘಟನೆ ಎಂದು ರಾಜ್ಯಪಾಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇವರನ್ನು ನನ್ನ ವಿರುದ್ಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಛೂ ಬಿಟ್ಟಿದ್ದಾರೆಂದು ರಾಜ್ಯಪಾಲರು ಆರೋಪಿಸಿದ್ದಾರೆ.
ಮತ್ತೊಂದೆಡೆ ಕಾರ್ಯಾಗಾರದ ಅಧ್ಯಕ್ಷರಾಗಿದ್ದ ಕ್ಯಾಲಿಕಟ್ ವಿವಿಯ ಉಪಕುಲಪತಿ ಎಂಕೆ ಜಯರಾಜ್ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಸಭಾಂಗಣದಲ್ಲಿ ಸೆಮಿನರ್ ನಡೆಯುತ್ತಿದ್ದರೆ, ಕ್ಯಾಂಪಸ್‌ನಲ್ಲಿ ಎಸ್‌ಎಫ್‌ಐ ಪ್ರತಿಭಟನೆ ಮುಂದುವರಿದಿದೆ.

Latest Indian news

Popular Stories