ಟೋಲ್‌ಗೇಟ್‌ಗಳಲ್ಲಿ ಪತ್ರಕರ್ತರ ವಾಹನಗಳಿಗೆ ಉಚಿತ ಪ್ರವೇಶ: ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ

ಉಡುಪಿ, ಜು.19: ಉಡುಪಿ ಜಿಲ್ಲೆಯ ಪಡುಬಿದ್ರಿ ಹೆಜಮಾಡಿ ಹಾಗೂ ಬೈಂದೂರು ಶಿರೂರು ಟೋಲ್‌ಗೇಟ್‌ನಲ್ಲಿ ಮಾಧ್ಯಮದವರ ವಾಹನಗಳಿಗೆ ಉಚಿತ ಪ್ರವೇಶ ಕಲ್ಪಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗ ಇಂದು ಕೇಂದ್ರ ಸಚಿವೆ ಹಾಗೂ ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಮಣಿಪಾಲ ರಜತಾದ್ರಿ ಯಲ್ಲಿರುವ ಸಂಸದರ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ಜಿಲ್ಲಾ ಸಂಘದಲ್ಲಿ ಸುಮಾರು 170 ಮಂದಿ ಸದಸ್ಯರಿದ್ದು, ಇವರಿಗೆ ರಾಜ್ಯ ಸಂಘದ ಗುರುತಿನ ಚೀಟಿಯನ್ನು ನೀಡಲಾಗಿದೆ. ಈ ಪೈಕಿ 15 ರಿಂದ 20 ಮಂದಿಯ ಬಳಿ ಕಾರುಗಳಿದ್ದು, ಇವರಿಗೆ ಸುದ್ದಿ ಮಾಡಲು ತೆರಳಲು ಅನುಕೂಲ ವಾಗುವಂತೆ ಹೆಜಮಾಡಿ ಮತ್ತು ಶಿರೂರು ಟೋಲ್ಗೇಟ್‌ಗಳಲ್ಲಿ ಗುರುತಿನ ಚೀಟಿ ತೋರಿಸಿದ್ದಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದಕ್ಕೆ ಸ್ಪಂದಿಸಿದ ಸಚಿವರು, ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ ಉಪಸ್ಥಿತರಿದ್ದರು

Latest Indian news

Popular Stories