ಅನ್ನಭಾಗ್ಯ ಯೋಜನೆ ಜಾರಿಗೆ 2.38 ಲಕ್ಷ ಟನ್ ಅಕ್ಕಿ ಕೊರತೆ ಇದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅನ್ನಭಾಗ್ಯ ಯೋಜನೆ ಜಾರಿಗೆ 2.38 ಲಕ್ಷ ಟನ್ ಅಕ್ಕಿ ಕೊರತೆ ಎದುರಾಗಿದೆ. ನೆರೆ ರಾಜ್ಯಗಳಿಂದಲೂ ಅಕ್ಕಿ ಪಡೆಯಲು ಸಾಧ್ಯವಾಗುತ್ತಿಲ್ಲ. ಛತ್ತೀಸ್‌ಗಢ ರಾಜ್ಯದಲ್ಲಿ ದಾಸ್ತಾನು ಇದೆ. ಆದರೆ, ಅದಕ್ಕೆ ಸಾಗಾಣೆ ವೆಚ್ಚ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಛತ್ತೀಸ್‌ಗಢದಿಂದ ಅಕ್ಕಿ ನೀಡುವಂತೆ ಮಾಡಲಾಗಿದೆ. ಆದರೆ, ತೆಲಂಗಾಣ ಮನವಿಯನ್ನು ತಿರಸ್ಕರಿಸಿದೆ, ಆಂಧ್ರಸರ್ಕಾರ ಕೂಡ ಮುಂದೆ ಬಂದಿಲ್ಲ. ಛತ್ತೀಸ್‌ಗಢ ಸರ್ಕಾರವು ಸುಮಾರು 1.5 ಲಕ್ಷ ಟನ್‌ಗಳಷ್ಟು ಅಕ್ಕಿಯನ್ನು ಪೂರೈಸುವುದಾಗಿ ಭರವಸೆ ನೀಡಿದೆ, ಆದರೆ ಸಾಗಣೆಯ ವೆಚ್ಚವು ಹೆಚ್ಚಾಗುತ್ತದೆ ಎಂದು ಹೇಳಿದರು.

ರೈತರಿಂದೇಕೆ ಅಕ್ಕಿ ಖರೀದಿ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಯಚೂರಿನಲ್ಲಿ ಮಾತ್ರ ಹೆಚ್ಚಿನ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ, ಅಲ್ಲಿ ಅಕ್ಕಿ ದುಬಾರಿಯಾಗಿದೆ, ಕೆಜಿಗೆ 55 ರೂ.ಗೆ ನೀಡಬೇಕಿದೆ. ಆದರೆ ಭಾರತೀಯ ಆಹಾರ ನಿಗಮದ ಅಕ್ಕಿ ಕೆಜಿಗೆ 34 ರೂ ಆಗಿದೆ ಎಂದು ತಿಳಿಸಿದರು.

ಅಕ್ಕಿ ನೀಡಲು ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಈ ಯೋಜನೆ ಬಡವರಿಗಾಗಿ ಆಗಿದೆ. ಈ ಹಿಂದೆ ಮನವಿ ಮಾಡಿಕೊಂಡಾಗ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡಲು ಒಪ್ಪಿಕೊಂಡಿದ್ದರು. ಆದರೆ ನಂತರ ಸಾಧ್ಯವಿಲ್ಲ ಎಂದು ಉತ್ತರಿಸಿದರು ಎಂದು ಹೇಳಿದರು.

ವಿದ್ಯುತ್ ದರ ಏರಿಕೆ ವಿರೋಧಿಸಿ ಕೈಗಾರಿಕೆ ಸಂಘಗಳು ಪ್ರತಿಭಟನೆ ನಡೆಸಲು ಮುಂದಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಧಿಕಾರಿಗಳು ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದರು.

Latest Indian news

Popular Stories