ಮಂಗಳೂರಿಗೆ ಮೋದಿ‌ ಬಂದ ಬೆನ್ನಲ್ಲೇ ‘ಬಿರುವೆರ್ ಕುಡ್ಲ’ದ ಅಸಮಾಧಾನ ಸ್ಪೋಟ

ಮಂಗಳೂರು: ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ, ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್ ಶೋ ನಡೆಸಿದ್ದು, ಇದರ ಬೆನ್ನಲ್ಲೇ ಬಿರುವೆರ್ ಕುಡ್ಲ ಸಂಘಟನೆ ತನ್ನ ಅಸಮಾಧಾನ ಹೊರಹಾಕಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ, ನಾವು ಮೋದಿಗಾಗಿ ಬಹಳಷ್ಟು ಕೆಲಸ ಮಾಡಿದ್ದೇವೆ. ಹಲವು ವಿರೋಧದ ನಡುವೆಯೂ ನಾರಾಯಣ ಗುರುಗಳಿಗೆ ವೃತ್ತ, ಪ್ರತಿಮೆ ನಿರ್ಮಿಸಿದ್ದೇವೆ. ಆದರೆ ಮೋದಿಯ ಕಾರ್ಯಕ್ರಮದಲ್ಲಿ ನಮ್ಮೆಲ್ಲರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು

ಲೇಡಿಹಿಲ್ ಸರ್ಕಲ್ ಅನ್ನು ಬ್ರಹ್ಮಶ್ರೀ ನಾರಾಯಣ ಗುರು ವೃತ್ತವನ್ನಾಗಿ ಮಾಡಲು ಬಿರುವೆರ್ ಕುಡ್ಲ ಸಂಘಟನೆ ಬಹಳಷ್ಟು ಶ್ರಮಿಸಿದೆ. ಸರಕಾರಕ್ಕೆ ಒತ್ತಡಹಾಕಿ, ಒಂದಷ್ಟು ಮಂದಿಯ ವಿರೋಧ ಕಟ್ಟಿಕೊಂಡು ಈ ಸರ್ಕಲ್ ಆಗುವಲ್ಲಿಯೂ ಸಂಘಟನೆ ದೊಡ್ಡಮಟ್ಟದ ಹೋರಾಟವನ್ನೇ ಮಾಡಿದೆ‌. ಇದಕ್ಕಾಗಿ ಏಳೆಂಟು ಬಾರಿ ಠಾಣೆಯ ಮೆಟ್ಟಿಲನ್ನೂ ಏರಬೇಕಾಯಿತು. ಆದರೆ ದೇಶದ ಪ್ರಧಾನಿ ಮೋದಿವರು ಬಂದು ಸರ್ಕಲ್ ನ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಂದರ್ಭ ಬಿರುವೆರ್ ಕುಡ್ಲ ಸಂಘಟನೆಗೆ ಯಾವ ಹೇಳಿಕೆಯೂ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷದಲ್ಲಿಯೇ ಇಲ್ಲದವರಿಗೆ, ಉದ್ಯಮಿಗಳಿಗೆ, ಪಕ್ಷ ವಿರೋಧ ಮಾಡಿದ್ದವರನ್ನು ಏರ್ಪೋರ್ಟ್ ನಲ್ಲಿ ಮೋದಿಯವರನ್ನು ಸ್ವಾಗತಿಸಲು ಅವಕಾಶ ನೀಡಲಾಗಿದೆ. ಆದರೆ ಈ ವೃತ್ತವಾಗಲು ಶ್ರಮಿಸಿದವರಿಗೆ ಅವಕಾಶವಿಲ್ಲ. ತನಗೆ ಎಂಎಲ್ಎ ಸೀಟ್ ದೊರಕಿಸಿಕೊಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ನಳಿನ್ ಗೆ ಒತ್ತಡ ಹಾಕಿ ಎಂದು ಹೇಳಲು ಪದೇಪದೇ ಕರೆ ಮಾಡುತ್ತಿದ್ದ ಸತೀಶ್ ಕುಂಪಲರಿಗೆ ಈಗ ನಾವು ಮರೆತುಹೋಗಿದ್ದೇವೆ. ಅವರಿಗೆ ಈಗ ಇರುವ ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ ಮೂರು ವರ್ಷದವರೆಗೆ ಮಾತ್ರ ಇರಲಿದೆ. ಆ ಬಳಿಕ ಅವರೂ ಸಾಮಾನ್ಯ ಕಾರ್ಯಕರ್ತರೇ. ಸದ್ಯ ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ಎರಡು ಬಣಗಳಾಗಿದೆ. ನಳಿನ್ ಜೊತೆಯಿದ್ದವರನ್ನು ಸೈಡ್ ಲೈನ್ ಮಾಡಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಉದಯ ಪೂಜಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Indian news

Popular Stories