ಲೋಕಸಭೆ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಪ್ಲಸ್: ಕೈ ಅಭ್ಯರ್ಥಿ ಲಕ್ಷ್ಮಣ್ ಗೆ ಒಕ್ಕಲಿಗ ಸಂಘದ ಬೆಂಬಲ

ಮೈಸೂರು: ಲೋಕಸಭೆ ಚುನಾವಣೆಗೆ ಒಂದು ವಾರ ಸಮಯ ಬಾಕಿ ಇರುವಾಗಲೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಅವರಿಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಒಕ್ಕಲಿಗ ಸಂಘ ಬೆಂಬಲ ಸೂಚಿಸಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬೆಂಬಲ ಸಿಕ್ಕಿದಂತಾಗಿದೆ.

ಒಕ್ಕಲಿಗರನ್ನು ಕಣಕ್ಕಿಳಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೆಕ್ಕಾಚಾರದ ನಿರ್ಧಾರ ಕಾಂಗ್ರೆಸ್‌ಗೆ ಫಲಪ್ರದವಾಗಿದೆ, ಇದರಿಂದ ಮೈಸೂರು ರಾಜ ವಂಶಸ್ಥ ಬಿಜೆಪಿಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಭಾರೀ ಸವಾಲು ಎದುರಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಲಕ್ಷ್ಮಣ ಅವರಿಗೆ ಅವಿರೋಧ ಬೆಂಬಲ ವ್ಯಕ್ತಪಡಿಸಿದರು. ನಾಲ್ಕು ದಶಕಗಳ ನಂತರ ಒಕ್ಕಲಿಗರನ್ನು ಕಾಂಗ್ರೆಸ್ ಕಣಕ್ಕಿಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದರು. ಪಕ್ಷಕ್ಕಿಂತ ಸಮುದಾಯದ ಪ್ರಾತಿನಿಧ್ಯಕ್ಕೆ ತಮ್ಮ ಬೆಂಬಲ ಎಂದು ಮರಿಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಸಂಘ ಖಂಡನೆ ವ್ಯಕ್ತಪಡಿಸಿದೆ. ಲಕ್ಷ್ಮಣ್ ಅವರ ಒಕ್ಕಲಿಗ ಗುರುತನ್ನು ಪ್ರಶ್ನಿಸಿರುವ ಸಿಂಹ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಕಾಂಗ್ರೆಸ್ ನಾಯಕ ಲಕ್ಷ್ಮಣ್ ಸಹ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದರು, ಯಾವುದೇ ಒಕ್ಕಲಿಗೇತರರು ಸ್ಪರ್ಧಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಯದುವೀರ್ ಮತ್ತು ಮೈಸೂರು ರಾಜಮನೆತನದ ಮೇಲಿನ ಗೌರವವಿದೆ, ಆದರೆ ಚುನಾವಣಾ ವಿಷಯಕ್ಕೆ ಬಂದರೆ ಸಮುದಾಯದ ಕಲ್ಯಾಣಕ್ಕೆ ಆದ್ಯತೆ ನೀಡುವುದು ತಮ್ಮ ಕರ್ತವ್ಯ ಎಂದು ಹೇಳಿದ್ದಾರೆ.

Latest Indian news

Popular Stories