ಟಿ20 ಕ್ರಿಕೆಟ್: ಯುಎಸ್ ವಿರುದ್ಧ ಸರಣಿ ಸೋತ ಬಾಂಗ್ಲಾ ದೇಶ

ಹ್ಯೂಸ್ಟನ್: ಟಿ20 ವಿಶ್ವಕಪ್ ತಯಾರಿಗೆಂದು ಯುಎಸ್ ಪ್ರವಾಸ ನಡೆಸಿದ ಬಾಂಗ್ಲಾದೇಶ ತಂಡ ಸರಣಿ ಸೋಲಿನ ಅವಮಾನ ಎದುರಿಸಿದೆ. ಮೊದಲ ಟಿ20 ಪಂದ್ಯದಲ್ಲಿ ಅಚ್ಚರಿಯ ರೀತಿಯಲ್ಲಿ ಗೆಲುವು ಕಂಡಿದ್ದ ಯುಎಸ್, ಇದೀಗ ಎರಡನೇ ಪಂದ್ಯದಲ್ಲೂ ಗೆದ್ದು ಸರಣಿ ಜಯ ಸಾಧಿಸಿದೆ.

ಹೂಸ್ಟನ್ ಪ್ರೈರೀ ವ್ಯೂ ಕ್ರಿಕೆಟ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ ಆರು ವಿಕೆಟ್ ನಷ್ಟಕ್ಕೆ 144 ರನ್ ಮಾಡಿದರೆ, ಬಾಂಗ್ಲಾದೇಶ ತಂಡವು 138 ರನ್ ಗಳಿಗೆ ಆಲೌಟಾಯಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಯುಎಸ್ 2-0 ಅಂತರದ ಮುನ್ನಡೆ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಯುಎಸ್ ಸ್ಟೀವನ್ ಟೇಲರ್ ಮತ್ತು ನಾಯಕ ಮೊನಾಂಕ್ ಪಟೇಲ್ ಉತ್ತಮ ಆರಂಭ ಒದಗಿಸಿದರು. ಸ್ಟೀವನ್ 31 ರನ್ ಮಾಡಿದರೆ ಪಟೇಲ್ 42 ರನ್ ಗಳಿಸಿದರು. ಉಳಿದಂತೆ ಆ್ಯರೋನ್ ಜೋನ್ಸ್ 35 ರನ್ ಗಳಿಸಿದರು.ಬಾಂಗ್ಲಾ ಪರ ಮುಸ್ತಫಿಜುರ್, ಶೊರಿಫುಲ್ ಇಸ್ಲಾಂ ಮತ್ತು ರಿಷಾದ್ ಹೊಸೈನ್ ತಲಾ ಎರಡು ವಿಕೆಟ್ ಕಿತ್ತರು.

ಗುರಿ ಬೆನ್ನಟ್ಟಿದ ಬಾಂಗ್ಲಾ ಮೊದಲ ಓವರ್ ನಲ್ಲೇ ಸೌಮ್ಯ ಸರ್ಕಾರ್ ವಿಕೆಟ್ ಕಳೆದುಕೊಂಡಿತು. ನಾಯಕ ನಜ್ಮುಲ್ ಶಾಂಟೋ 36 ರನ್ ಗಳಿಸಿದರೆ, ಅನುಭವಿ ಶಕೀಬ್ 30 ರನ್ ಮಾಡಿದರು. ಆದರೆ ಬಳಿಕ ಸತತ ವಿಕೆಟ್ ಕಳೆದುಕೊಂಡ ಬಾಂಗ್ಲಾ ಸೋಲಿಗೆ ಶರಣಾಯಿತು.

ಯುಎಸ್ ಪರ ಆಲಿ ಖಾನ್ ಮೂರು ವಿಕೆಟ್ ಪಡೆದರೆ, ಸೌರಭ್ ನೇತ್ರಾವಲ್ಕರ್ ಮತ್ತು ಶಾಡ್ಲೆ ವ್ಯಾನ್ ಎರಡು ವಿಕೆಟ್ ಕಿತ್ತರು. ಪೂರ್ಣ ಪ್ರಮಾಣದ ತಂಡದೆದುರು ಮೊದಲ ಬಾರಿಗೆ ಯುಎಸ್ ಟಿ20 ಸರಣಿ ಜಯ ಸಾಧಿಸಿತು.

Latest Indian news

Popular Stories