ಯತ್ನಾಳ್ 1 ವಾರದಲ್ಲಿ ಆರೋಪ ಸಾಬೀತು ಪಡಿಸಲಿ, ಇಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಲಿ: ತನ್ವೀರ್ ಹಶ್ಮಿ

ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತನ್ನ ಮಾಡಿರುವ ಆರೋಪವನ್ನು ಒಂದು ವಾರದಲ್ಲಿ ಸಾಬೀತು ಪಡಿಸಿದರೆ ನಾನು ದೇಶ ತೊರೆಯಲು ಸಿದ್ಧನಿದ್ದೇನೆ. ಒಂದು ವೇಳೆ ಆರೋಪ ಸಾಬೀತು ಪಡಿಸಲು ವಿಫಲವಾದರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕು ಎಂದು ವಿಜಯಪುರದ ಹಜರತ್ ಹಾಶಿಂಪೀರ ದರ್ಗಾದ ಧರ್ಮಾಧಿಕಾರಿ ಸೈಯದ್ ಮೊಹಮ್ಮದ್ ತನ್ವೀರ್ ಹಶ್ಮಿ ಅವರು ಬುಧವಾರ ಸವಾಲು ಹಾಕಿದ್ದಾರೆ.

ಇಂದು ತಮ್ಮ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ಮಾಧ್ಯಮಕ್ಕೆ ಹೇಳಿಕೆ ಬಿಡುಗಡೆ ಮಾಡಿರುವ ಸೈಯದ್ ಮೊಹಮ್ಮದ್ ತನ್ವೀರ್ ಹಶ್ಮಿ, “ಒಂದು ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ನನ್ನ ವಿರುದ್ಧದ ಆರೋಪವನ್ನು ಸಾಬೀತು ಮಾಡಿದರೆ ನಾನು ಈ ದೇಶವನ್ನೆ ತ್ಯಾಗ ಮಾಡಿ ಪಲಾಯನ ಮಾಡುತ್ತೇನೆ. ಸಾಬೀತು ಮಾಡುವಲ್ಲಿ ವಿಫಲವಾದರೆ, ಬಸನಗೌಡ ಪಾಟೀಲ್ ಯತ್ನಾಳ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಕಿಸ್ತಾನಕ್ಕೆ ಪಲಾಯನವಾಗಬೇಕು ಅಂತ ಸವಾಲೆಸೆಯುತ್ತೇನೆ. ಯತ್ನಾಳ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಇದರಲ್ಲಿ ಯಾವುದೇ ರೀತಿಯ ಸತ್ಯಾಂಶ ಇರುವುದಿಲ್ಲ” ಎಂದು ಹೇಳಿದ್ದಾರೆ.
ಐಸಿಸ್ ಜೊತೆ ನಂಟಿದೆ ಎಂದು ಯತ್ನಾಳ್ ಅವರು ಬಿಡುಗಡೆ ಮಾಡಿದ ಚಿತ್ರಗಳು ನನ್ನ ಅಧಿಕೃತ ಫೇಸ್ ಬುಕ್ ಪೇಜ್ ಗೆ ನಾನೇ ಅಪ್ ಲೋಡ್ ಮಾಡಿರುವ ಚಿತ್ರಗಳಾಗಿವೆ. ಸುಮಾರು 12 ವರ್ಷಗಳ ಹಿಂದೆ ನಾನು ಇರಾಖ್ ನ ಬಾಗ್ದಾದ್ ಗೆ ತೆರಳಿದ್ದೆ. ಈ ವೇಳೆ ಪ್ರಸಿದ್ಧ ಸೂಫಿ ಮಹಬೂಬ್ ಎಸುಭಾನಿ ಗೌಸ್ ಎ ಆಜಂ ಅವರ ದರ್ಶನಕ್ಕೆ ಹೋದಾಗ ಅಲ್ಲಿನ ದರ್ಗಾದ ಪೀಠಾಧಿಪತಿ ಖಲೀದ್ ಜಿಲಾನಿ ಅವರ ಆರ್ಶೀವಾದ ಪಡೆಯುವ ಸಂದರ್ಭದಲ್ಲಿ ತೆಗೆದಂತಹ ಚಿತ್ರಗಳಾಗಿವೆ. ಮತ್ತೊಂದು ಚಿತ್ರ ಅವರ ಅಂಗ ರಕ್ಷಕ ನನ್ನನ್ನು ಪೀಠಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ತೆಗೆದ ಚಿತ್ರವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Latest Indian news

Popular Stories