ತೆಲಂಗಾಣ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಆಯ್ಕೆ, ಗುರುವಾರ ಪ್ರಮಾಣವಚನ

ನವದೆಹಲಿ: ತೆಲಂಗಾಣದ ಮುಂದಿನ ಮುಖ್ಯಮಂತ್ರಿಯಾಗಿ ರೇವಂತ್‌ ರೆಡ್ಡಿ ಅವರನ್ನು ಕಾಂಗ್ರೆಸ್‌ ಮಂಗಳವಾರ ಅಧಿಕೃತವಾಗಿ ಆಯ್ಕೆ ಮಾಡಿದ್ದು, ಗುರುವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಆಯ್ಕೆ ಸಂಬಂಧ ಇಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಭೆಯ ನಂತರ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಸಿ.ವೇಣುಗೋಪಾಲ್ ರೇವಂತ್ ರೆಡ್ಡಿ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.

ರೇವಂತ್ ರೆಡ್ಡಿ ಅವರನ್ನು ತೆಲಂಗಾಣ ಶಾಸಕಾಂಗ ಪಕ್ಷದ ಮುಖ್ಯಸ್ಥರನ್ನಾಗಿ ಇಂದು ಸಂಜೆ ಔಪಚಾರಿಕವಾಗಿ ಆಯ್ಕೆ ಮಾಡಲಾಯಿತು. ಡಿಸೆಂಬರ್ 7 ರಂದು ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ಕೆಸಿ ವೇಣುಗೋಪಾಲ್ ತಿಳಿಸಿದರು.

ಮಲ್ಕಜ್ ಗಿರಿ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ 56 ವರ್ಷದ ರೇವಂತ್ ರೆಡ್ಡಿ ಅವರು 2017ರಲ್ಲಿ ತೆಲುಗು ದೇಶಂ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು.

Latest Indian news

Popular Stories