ಹೂಡೆ: ಹೂಡೆ ಪರಿಸರದಲ್ಲಿ ವಿಪರೀತ ಬೀದಿ ನಾಯಿ ಹಾವಳಿ ಹೆಚ್ಚಾಗುತ್ತಿದ್ದು ಜನರ ಮೇಲೆ ದಾಳಿ ಮಾಡುತ್ತಿರುವ ಕುರಿತು ವರದಿಯಾಗಿದೆ.
ಶನಿವಾರ ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ದಾಳಿಗೆ ಮುಂದಾಗಿದ್ದು ಬಾಲಕಿಯ ಕೈಯಲ್ಲಿದ್ದ ಕೊಡೆ ಬೀಸಿ ರಕ್ಷಸಿಕೊಂಡಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಿತರಾಗಿದ್ದು ತಕ್ಷಣ ನಾಯಿ ಹಾವಳಿಗೆ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಈ ಕುರಿತು ಪಂಚಾಯತ್ ಅಧಿಕಾರಿಗಳಲ್ಲಿ ಮಾತನಾಡಿದಾಗ “ನಾಯಿಗಳನ್ನು ಹಿಡಿದು ಕೊಲ್ಲುವ ಅಧಿಕಾರ ಗ್ರಾ ಪಂ ಗೆ ಇಲ್ಲವಾಗಿದೆ. ವರ್ಷಕ್ಕೊಂದು ಬಾರಿ ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸಿ ಮತ್ತು ರೇಬಿಸ್ ನಿರೋಧಕ ಲಸಿಕೆ ಹಾಕಿಸಿ ಹಿಡಿದಲ್ಲಿಗೆ ವಾಪಾಸು ತಂದು ಬಿಡಬೇಕಾಗಿದೆ. ಗ್ರಾ ಪಂ ನಿಂದ ವರ್ಷಕ್ಕೆ ಒಂದು ಸಲ ಮಾತ್ರ ಮಾಡಿಸಬಹುದಾಗಿದೆ.
ಅಲ್ಲದೇ ಅವುಗಳನ್ನು ಹಿಡಿಯುವುದೇ ಒಂದು ದೊಡ್ಡ ಸಮಸ್ಯೆಯಾಗಿದ್ದು ಅಲ್ಲದೇ ಹಿಡಿದಾಗ ಜಿಪಿಎಸ್ ಫೋಟೋ ತೆಗೆಯಬೇಕು.ಶಸ್ತ್ರ ಚಿಕಿತ್ಸೆ ನಡೆಸಿದ ಬಳಿಕ ಮತ್ತೆ ಹಿಡಿದಲ್ಲಿಯೇ ತಂದು ಬಿಡಬೇಕಾಗಿದೆ. ಆ ಸಮಯದಲ್ಲೂ ಮತ್ತೆ ಜಿಪಿಎಸ್ ಮಾಡಬೇಕಿದೆ” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಜನಪ್ರತಿನಿಧಿಗಳು, ಶಾಸಕರು, ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯವಾಗಿ ಪುಟ್ಟ ಮಕ್ಕಳನ್ನು ನಾಯಿ ದಾಳಿಯಿಂದ ರಕ್ಷಿಸಬೇಕಾಗಿದೆ.
Video: