ಎಸಿಎಂಎಂ ಕೋರ್ಟ್ ಸಂಕೀರ್ಣದಲ್ಲಿ TNIE ವರದಿಗಾರನ ಮೇಲೆ ಹಲ್ಲೆ!

ಬೆಂಗಳೂರು: ಸುದ್ದಿ ಮಾಡಲು ತೆರಳಿದ್ದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ 23 ವರ್ಷದ ವರದಿಗಾರ ಟಿಟಿ ರಕ್ಷಿತ್ ಗೌಡ ಅವರ ಮೇಲೆ ನಾಲ್ವರು ಅಪರಿಚಿತ ವ್ಯಕ್ತಿಗಳ ತಂಡವು ಕೋರ್ಟ್ ಹಾಲ್‌ ಹೊರಗೆ ದಾಳಿ ಮಾಡಿ ಅವರ ಮೊಬೈಲ್ ಫೋನ್ ದೋಚಿದೆ. ನೃಪತುಂಗ ರಸ್ತೆಯಲ್ಲಿರುವ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ

ಕನ್ನಡದ ಖ್ಯಾತ ನಟ ದರ್ಶನ್ 2 ನೇ ಆರೋಪಿ ಆಗಿರುವ 33 ವರ್ಷದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ರಕ್ಷಿತ್ ಕವರ್ ಮಾಡುತ್ತಿದ್ದರು. ದರ್ಶನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಇತರ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ರಕ್ಷಿತ್ ಸುದ್ದಿ ಮಾಡಲು ಅಲ್ಲಿಗೆ ತೆರಳಿದ್ದರು. ವಿಚಾರಣೆ ಶುರುವಾಗಲು ಪ್ಯಾಸೆಜ್ ನಲ್ಲಿ ಅವರು ನಿಂತಿದ್ದಾಗ ಅಲ್ಲಿಗೆ ಬಂದ ನಾಲ್ವರು ಅಪರಿಚಿತ ಆರೋಪಿಗಳು, ಅವರ ಗುರುತಿನ ಬಗ್ಗೆ ಪ್ರಶ್ನಿಸಲು ಆರಂಭಿಸಿದ್ದಾರೆ.

ನಂತರ ಮಾಧ್ಯಮದವರು ಎಂದು ಹೇಳಿದಾಗ ಹಲ್ಲೆ ಮಾಡಲು ಪ್ರಾರಂಭಿಸಿದ್ದಾರೆ. ಸುಮಾರು 50 ಮೀಟರ್ ದೂರದವರೆಗೂ ಅವರನ್ನು ಎಳೆದೊಯ್ಯಲಾಗಿದೆ. ಅವಾಚ್ಯ ಪದಗಳಿಂದ ಅವರನ್ನು ನಿಂದಿಸಿದ್ದು, ಕೋರ್ಟ್ ಸಂಕೀರ್ಣದಿಂದ ತೆರಳುವಂತೆ ತಾಕೀತು ಮಾಡಿದ್ದಾರೆ. ನ್ಯಾಯಾಲಯದ ಸಂಕೀರ್ಣದಲ್ಲಿ ಮತ್ತೆ ಕಾಣಿಸಿಕೊಂಡರೆ ಭೀಕರ ಪರಿಣಾಮ’ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ಫಾರ್ಮಲ್ ಬಿಳಿ ಬಣ್ಣದ ಪೂರ್ಣ ತೋಳಿನ ಶರ್ಟ್‌ಗಳನ್ನು ಧರಿಸಿದ್ದ ವ್ಯಕ್ತಿಗಳು ಅವರ ಮೊಬೈಲ್ ಫೋನ್ ನ್ನು ಸಹ ಕಸಿದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮೂಗೇಟು ಹಾಗೂ ರಕ್ತಸ್ರಾವದಿಂದಾಗಿ ನ್ಯಾಯಾಲಯದ ಸಂಕೀರ್ಣದಿಂದ ಹೊರನಡೆದ TNIE ವರದಿಗಾರ, ಹಲಸೂರು ಗೇಟ್ ಪೊಲೀಸರಿಗೆ ಘಟನೆ ಬಗ್ಗೆ ದೂರು ನೀಡಿದ್ದಾರೆ.

ಡಿಸಿಪಿ( ಸೆಂಟ್ರಲ್ ) ಹೆಚ್ ಟಿ ಶೇಖರ್, ಪೊಲೀಸ್ ಠಾಣೆಗೆ ಧಾವಿಸಿ, ವೈಯಕ್ತಿಕವಾಗಿ ಕೇಸ್ ವಿಚಾರಿಸಿದರು. ಕೂಡಲೇ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಮಧ್ಯೆ ರಕ್ಷಿತ್ ಅವರ ಫೋನ್ ಅನ್ನು ಡಿಸಿಪಿ ಹಿಂಪಡೆದು ಅವರಿಗೆ ಹಸ್ತಾಂತರಿಸಿದರು.

ದರ್ಶನ್ ಅವರ ನ್ಯಾಯಾಲಯದ ವಿಚಾರಣೆ ನಂತರ ಕೆಲವು ವಕೀಲರು ಬಂದು ವರದಿಗಾರರಿಗೆ ಸೇರಿದ ಕೆಲವು ಫೋನ್‌ಗಳನ್ನು ನೀಡಿದರು. ನ್ಯಾಯಾಲಯದ ಪ್ರಕರಣವನ್ನು ವರದಿ ಮಾಡಲು ಬಂದಿದ್ದ ವರದಿಗಾರರಿಂದ ಕೆಲವು ಅಪರಿಚಿತರು ಫೋನ್‌ಗಳನ್ನು ಕಸಿದುಕೊಂಡಿದ್ದಾರೆ. ಮುಂದೆ ತೊಂದರೆಯಾಗುವ ಅರಿವಾಗಿ ಫೋನ್‌ಗಳನ್ನು ಹಸ್ತಾಂತರಿಸಿದ್ದಾರೆ. ನ್ಯಾಯಾಲಯದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಕೇಳುತ್ತೇವೆ ಮತ್ತು ದಾಳಿಯ ಹಿಂದೆ ಇರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿಪಿ ಹೇಳಿದರು.

ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ ಮಾತನಾಡಿ, ನಟ ದರ್ಶನ್ ಅವರನ್ನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸುವಾಗ ನಡೆದಿರುವ ಈ ದುರಾದೃಷ್ಟ ಘಟನೆಗೆ ಕೆಲವು ಕಿಡಿಗೇಡಿಗಳು ಕಾರಣರಾಗಿದ್ದಾರೆ. ಇಂತಹ ಕೃತ್ಯವನ್ನು ಖಂಡಿಸುತ್ತೇವೆ. ಕಾನೂನು ಜಾರಿ ಏಜೆನ್ಸಿಗಳು ಈ ಕುರಿತು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದರು.

Latest Indian news

Popular Stories