ಮರ ಕಡಿಯುವ ವಿಚಾರದಲ್ಲಿ ಜಗಳ-ಕಿರುತೆರೆ ನಟನ ಗುಂಡಿನ ದಾಳಿಗೆ ಯುವಕ ಮೃತ್ಯು

ಲಕ್ನೋ: ನೀಲಗಿರಿ ಮರಗಳನ್ನು ಕಡಿಯುವ ವಿಚಾರದಲ್ಲಿ ನಡೆದ ಗಲಾಟೆ ಸಂದರ್ಭದಲ್ಲಿ ಖ್ಯಾತ ಕಿರುತೆರೆ ನಟ ಗುಂಡು ಹಾರಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಬಿಜ್ನೂರ್‌ ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಟನನ್ನು ಪೊಲೀಸರು ಬಂಧಿಸಿದ್ದಾರೆ.

ವರದಿಯ ಪ್ರಕಾರ, ಯೇ ಪ್ಯಾರ್‌ ನ ಹೋಗಾ ಮತ್ತು ಮಧುಬಾಲಾದಂತಹ ಜನಪ್ರಿಯ ಟಿವಿ ಶೋಗಳ ನಟ ಭೂಪಿಂದರ್‌ ಸಿಂಗ್‌ ತನ್ನ ಬಿಜ್ನೂರ್‌ ಸಮೀಪದ ತೋಟಕ್ಕೆ ಫೆನ್ಸ್(ತಡೆಬೇಲಿ) ನಿರ್ಮಿಸಲು ಮುಂದಾಗಿದ್ದರು. ಸಿಂಗ್‌ ತೋಟದ ಬಳಿಯೇ ಗುರ್ದೀಪ್‌ ಸಿಂಗ್‌ ಕೃಷಿ ತೋಟವಿದ್ದು, ಭೂಪಿಂದರ್ ಕೆಲವು ನೀಲಗಿರಿ ಮರಗಳನ್ನು ಕಡಿಯಲು ಮುಂದಾದ ವೇಳೆ ಇಬ್ಬರ ನಡುವೆ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿತ್ತು.

ವಾಕ್ಸಮರ ಹೊಡೆದಾಟಕ್ಕೆ ತಿರುಗಿದಾಗ ಭೂಪಿಂದರ್‌ ಸಿಂಗ್‌ ಮತ್ತು ಆತನ ಮೂವರು ನಿಕಟವರ್ತಿಗಳು ಗುರ್ದೀಪ್‌ ಸಿಂಗ್‌ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದರು. ಈ ಗಲಾಟೆ ಸಂದರ್ಭದಲ್ಲಿ ಭೂಪಿಂದರ್‌ ತನ್ನ ಪರವಾನಿಗೆಯ ಪಿಸ್ತೂಲ್‌ ನಿಂದ ಗುಂಡು ಹಾರಿಸಿದ್ದ ಪರಿಣಾಮ ಗುರ್ದೀಪ್‌ ಸಿಂಗ್‌ ಪುತ್ರ ಗೋವಿಂದ್‌ (22ವರ್ಷ) ಕೊನೆಯುಸಿರೆಳೆದಿದ್ದ ಎಂದು ವರದಿ ವಿವರಿಸಿದೆ.

ಘಟನೆಯಲ್ಲಿ ಗುರ್ದೀಪ್‌, ಮತ್ತೊಬ್ಬ ಪುತ್ರ ಅಮ್ರಿಕ್‌ ಹಾಗೂ ಪತ್ನಿ ಬೀರೋ ಬಾಯಿ ಗಾಯಗೊಂಡಿದ್ದು, ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ಪ್ರಕರಣದಲ್ಲಿ ಭೂಪಿಂದರ್‌ ನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಕೊಲೆ, ಕೊಲೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Latest Indian news

Popular Stories