ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಮತ ಎಣಿಕೆ ಆರಂಭ; ಬಿಜೆಪಿಗೆ ಆರಂಭಿಕ ಮುನ್ನಡೆ

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಬಿಜೆಪಿಯ ಕೋಟ ಶ್ರೀನಿವಾಸ್ ಪೂಜಾರಿ ಅಂಚೆ ಮತ ಎಣಿಕೆಯಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬೆಳಿಗ್ಗೆ ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿ ಉಡುಪಿ ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ಶಾಲೆಯ ಸ್ಟ್ರಾಂಗ್ ರೂಮ್ ತೆರೆಯಲಾಯಿತು.ಮೊದಲಿಗೆ ಅಂಚೆ ಮತ ಎಣಿಕೆ ನಂತರ ಇವಿಎಮ್ ಎಣಿಕೆ ಮಾಡಲಾಗುತ್ತದೆ.

ಬೆಳಗ್ಗೆ ಏಳು ಗಂಟೆ ಸುಮಾರಿಗೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ., ಅಪರ ಜಿಲ್ಲಾಧಿಕಾರಿ ಮಮತಾದೇವಿ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮನ್ನು ತೆರೆಯಲಾಯಿತು.

ಮತ ಎಣಿಕಾ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದ್ದು ಸುಮಾರು 350 ಪೊಲೀಸರು ಮತ್ತು ಅಧಿಕಾರಿಗಳು, ಒಂದು ಕೆಎಸ್ಆರ್ ಪಿ, ಒಂದು ಜಿಲ್ಲಾ ಸಶಸ್ತ್ರ ಪಡೆ ಮತ್ತು ಒಂದು ಅಗ್ನಿಶಾಮಕ ವಾಹನ ವನ್ನು ನಿಯೋಜಿಸಲಾಗಿದೆ.

ಮತ ಎಣಿಕೆ ಕೇಂದ್ರಕ್ಕೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಆಗಮಿಸಿದ್ದಾರೆ.

ಏಪ್ರಿಲ್ 26 ರಂದು ರಾಜ್ಯದಲ್ಲಿ ನಡೆದ ಮೊದಲ ಹಂತ ಮತದಾನದ ವೇಳೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ನಡೆದಿತ್ತು. ಕ್ಷೇತ್ರದಲ್ಲಿ ಈ ಬಾರಿ ಶೇ.77.15ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ವಿಧಾನ ಪರಿಷತ್ನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ.ಜಯಪ್ರಕಾಶ್ ಹೆಗ್ಡೆ ಸೇರಿ ಒಟ್ಟು 10 ಮಂದಿ ಸ್ಪರ್ಧಿಗಳಿದ್ದಾರೆ.

Latest Indian news

Popular Stories