ಚೀನಾದಲ್ಲಿ ಭೂಗತ ಪಾತಕಿ ಪ್ರಸಾದ್‌ ಪೂಜಾರಿ ಬಂಧನ

ಬೀಜಿಂಗ್/ಮುಂಬೈ: ಭೂಗತ ಪಾತಕಿ, ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ ಪ್ರಸಾದ್‌ ಪೂಜಾರಿಯನ್ನು ಚೀನಾ ಗಡಿಪಾರು ಮಾಡಿದ್ದ ಬೆನ್ನಲ್ಲೇ ಮುಂಬೈ ಪೊಲೀಸರು ಪೂಜಾರಿಯನ್ನು ಚೀನಾದಿಂದ ಮುಂಬೈಗೆ ಕರೆತಂದು ವಿಶೇಷ ಕೋರ್ಟ್‌ ಗೆ ಹಾಜರುಪಡಿಸಿದ್ದು, 14 ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ.

ಉಡುಪಿ ಜಿಲ್ಲೆಯ ಕಾಪು ಪರಿಸರದ ಪ್ರಸಾದ್‌ ಪೂಜಾರಿ ವಿರುದ್ಧ ಕೊಲೆ, ಸುಲಿಗೆ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಪ್ರಸಾದ್‌ ಪೂಜಾರಿಯನ್ನು ಚೀನಾದಿಂದ ಭಾರತಕ್ಕೆ ಕರೆತರಲು ಮುಂಬೈ ಪೊಲೀಸರು ದೀರ್ಘಕಾಲದಿಂದ ಪ್ರಯತ್ನಿಸುತ್ತಿದ್ದರು.
ಕಳೆದ ವರ್ಷ ಏಪ್ರಿಲ್‌ ನಲ್ಲಿ ಪ್ರಸಾದ್‌ ಪೂಜಾರಿಯನ್ನು ಗಡಿಪಾರು ಮಾಡಲು ಚೀನಾ ಹಸಿರು ನಿಶಾನೆ ತೋರಿಸಿತ್ತು. 2010ರಿಂದ ಪೂಜಾರಿ ಚೀನಾದಲ್ಲಿ ತಲೆಮರೆಸಿಕೊಂಡಿದ್ದ. ಇಂಟರ್‌ ಪೋಲ್‌ ನೋಟಿಸ್‌ ಪರಿಣಾಮ 2023ರ ಮಾರ್ಚ್‌ ನಲ್ಲಿ ಪೂಜಾರಿ ಹಾಂಗ್‌ ಕಾಂಗ್‌ ನಲ್ಲಿ ಬಂಧನಕ್ಕೊಳಗಾಗಿದ್ದ.

ಈ ಹಿಂದೆ ಗಡಿಪಾರುಗೊಂಡಿದ್ದ ಗ್ಯಾಂಗ್‌ ಸ್ಟರ್‌ ಕುಮಾರ್‌ ಪಿಳ್ಳೈ ಹಾಗೂ ಛೋಟಾ ರಾಜನ್ ಗ್ಯಾಂಗ್‌ ನ ಮಾಜಿ ಸದಸ್ಯ ಪ್ರಸಾದ್‌ ಪೂಜಾರಿ. ಈತ ಚೀನಾದ ಯುವತಿಯನ್ನು ವಿವಾಹವಾದ ಹಿನ್ನೆಲೆಯಲ್ಲಿ ಈತನ ಗಡಿಪಾರಿಗೆ ಕಾನೂನು ತೊಡಕು ಉಂಟಾಗಿತ್ತು.
2019ರ ಡಿಸೆಂಬರ್‌ ನಲ್ಲಿ ಮುಂಬೈನಲ್ಲಿ ಶಿವಸೇನಾ ಕಾರ್ಯಕರ್ತ ಚಂದ್ರಕಾಂತ್‌ ಜಾಧವ್‌ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣದ ಬಳಿಕ ಪ್ರಸಾದ್‌ ಪೂಜಾರಿ ಹೆಸರು ಪ್ರಚಲಿತಕ್ಕೆ ಬಂದಿತ್ತು.
ಹಣ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಮುಂಬೈ ಪೊಲೀಸರು ಪಾತಕಿ ಪ್ರಸಾದ್‌ ತಾಯಿ ಇಂದಿರಾ ವಿಠಲ್‌ ಪೂಜಾರಿಯನ್ನು(62ವರ್ಷ) ಬಂಧಿಸಿದ್ದರು. ಮುಂಬೈ ಮೂಲದ ಬಿಲ್ಡರ್‌ ಬಳಿ ಹತ್ತು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಇಂದಿರಾ ಸೇರಿದಂತೆ ಸುನಿಲ್‌ ಅಂಗಾನೆ (56ವರ್ಷ) ಮತ್ತು ಸುಕೇಶ್‌ ಕುಮಾರ್‌ (28ವರ್ಷ)ನನ್ನೂ ಪೊಲೀಸರು ಬಂಧಿಸಿದ್ದರು.
ಮುಂಬೈನ ಠಾಗೋರ್‌ ನಗರದ ವಿಕ್ರೋಲಿಯ ನಿವಾಸಿಯಾಗಿದ್ದ ಪ್ರಸಾದ್‌ ಪೂಜಾರಿ ಉದ್ಯಮಿಗಳು ಮತ್ತು ಬಿಲ್ಡರ್ಸ್‌ ಗಳನ್ನು ಗುರಿಯಾಗಿರಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದ. ಬಂಧನ ಭೀತಿಯ ನಂತರ ಪೂಜಾರಿ ದಶಕಗಳ ಹಿಂದೆ ಮುಂಬೈನಿಂದ ಪರಾರಿಯಾಗಿ ಚೀನಾಕ್ಕೆ ಹೋಗಿ ತಲೆಮರೆಸಿಕೊಂಡಿದ್ದ.

Latest Indian news

Popular Stories