ವಿಜಯಪುರ: ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಭೇಟಿ ನೀಡಿ, ಗ್ರಾಪಂ ವ್ಯಾಪ್ತಿಯಲ್ಲಿನ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿಡೋಣಿ ಗ್ರಾಮ ಪಂಚಾಯತಿ ಆವರಣದಲ್ಲಿ ನಿರ್ಮಾಣಗೊಂಡಿರುವ ನಕ್ಷತ್ರ ಗಾರ್ಡನ್ ಹಾಗೂ ಫೇವರ್ಸ ವೀಕ್ಷಿಸಿದರು. ಇ-ಸ್ವತ್ತು ಹಾಗೂ ತೆರಿಗೆ ಸಂಗ್ರಹಣೆಯ ಪಿ.ಓ.ಎಸ್ ಯಂತ್ರ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಕಣಮುಚನಾಳ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಅಮೃತ ಸರೋವರ ಕೆರೆಯ ವಿನ್ಯಾಸ, ಒಳಹರಿವು-ಹೊರಹರಿವು, ಕಲ್ಲು ಜೋಡಣೆ ವ್ಯವಸ್ಥೆ ವೀಕ್ಷಿಸಿದರು. ಅಮೃತ ಸರೋವರ ನಿರ್ಮಾಣದಿಂದ ಈ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕಳೆದ ನಾಲ್ಕು ವರ್ಷಗಳಿಂದ ಹೆಚ್ಚಾಗಿದೆ ಎಂದು ಮಾಹಿತಿ ನೀಡಲಾಯಿತು. ಜಲ ಸಂರಕ್ಷಣೆಯ ಕುರಿತು ಈ ತರಹದ ಯೋಜನೆಗಳು ಮಾದರಿ ಎನಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಉರ್ದು ಶಾಲೆಗೆ ಭೇಟಿ ನೀಡಿ, ಬಿಸಿಯೂಟದ ಗುಣಮಟ್ಟ, ಮೂಲಭೂತ ಸೌಕರ್ಯಗಳ ಮಾಹಿತಿ ಪಡೆದುಕೊಂಡರು. ಶಾಲೆಗೆ ಬೆಂಚ್ ವಿತರಿಸಲು, ಶಾಲಾ ಆಟದ ಮೈದಾನ ಅಭಿವೃದ್ಧಿ ಮತ್ತು ಶಾಲಾ ಆವರಣದಲ್ಲಿ ನಿರ್ಮಿಸಿದ ಸುಂದರ ನೆಡುತೋಪು ವೀಕ್ಷಿಸಿ, ಮಕ್ಕಳಿಗೆ ಸುಂದರ ವಾತಾವರಣ ಕಲ್ಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮುಸ್ಲಿಂ ಸಮುದಾಯದ ಸ್ಮಶಾನ ಆವರಣದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಾದ ವಿವಿಧ ಬಗೆಯ ಸಸಿಗಳನ್ನು ಬೆಳೆಸಿರುವುದು, ವಿದ್ಯುದ್ದೀಪದ ವ್ಯವಸ್ಥೆ, ಸರ್ಕಾರಿ ಜಾಗೆಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಸಸಿಗಳನ್ನು ನೆಟ್ಟಿರುವುದು, ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿಯಡಿ 30 ಎಕರೆ ನೆಡುತೋಪು ನಿರ್ಮಾಣ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಕಲ್ಯಾಣಿ ಕಾಮಗಾರಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಬಬಲೇಶ್ವರ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜೆ.ಎಸ್.ಪಠಾಣ್, ಸಹಾಯಕ ನಿರ್ದೇಶಕರಾದ ಭಾರತಿ ಹಿರೇಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾಂತಲಾ ಶಿವಲಿಂಗಪ್ಪ ಕೊಟ್ಟಲಗಿ, ನಿಡೋಣಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬುರಾನ್ ಮುಲ್ಲಾ ಮುಜಾವರ, ತಾಲೂಕು ಪಂಚಾಯತಿಯ ಹಾಗೂ ಗ್ರಾಮ ಪಂಚಾಯತಿಯ ಇತರೆ ಅಧಿಕಾರಿಗಳು, ಸಿಬ್ಬಂದಿಯವರು ಹಾಗೂ ಇತರರು ಉಪಸ್ಥಿತರಿದ್ದರು.