ಜಮೀನುಗಳು ಮಾರಾಟ ಮಾಡಬೇಡಿ: ರೈತರಿಗೆ ಎಂಬಿ ಪಾಟೀಲ ಕರೆ

ವಿಜಯಪುರ: ನೀರಾವರಿ ಯೋಜನೆಗಳಿಂದಾಗಿ ಜಮೀನಿಗೆ ಉತ್ತಮ ಬೆಲೆ ಬಂದಿದ್ದು, ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅನ್ನದಾತರಿಗೆ ಕರೆ ನೀಡಿದ್ದಾರೆ.

ಬಬಲೇಶ್ವರದಲ್ಲಿ ನಡೆದ ಶ್ರೀ ಗುರುಪಾದೇಶ್ವರ ಶಿವಯೋಗಗಿಗಳ 181ನೇ ಪುಣ್ಯಸ್ಮರಣೋತ್ಸವ, ಶ್ರಾವಣ ಮಾಸಾಚರಣೆ, ಆಲಗೂರ- ಜಮಖಂಡಿ ಹಾಗೂ ಬಬಲೇಶ್ವರ ಬೃಹನ್ಮಠದ ಪಟ್ಟಾಧ್ಯಕ್ಷ ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳ 75ನೇ ಜನ್ಮದಿನದ ವಜ್ರ ಮಹೋತ್ಸವ ಹಾಗೂ 50ನೇ ವರ್ಷದ ಗುರುಪಟ್ಟಾಧಿಕಾರ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದರು.

ಹೈದರಾಬಾದ- ಕರ್ನಾಟಕ ಭಾಗದಲ್ಲಿ ನೀರಾವರಿಯಾದ ಬಳಿಕ ಅಲ್ಲಿನ ಹಲವಾರು ಜನ ರೈತರು ತಮ್ಮ ಜಮೀನನ್ನು ಹೊರ ರಾಜ್ಯಗಳ ಜನರಿಗೆ ಮಾರಾಟ ಮಾಡಿದ್ದಾರೆ. ನಮ್ಮ ಭಾಗದಲ್ಲಿ ಈಗ ಜಮೀನಿನ ಬೆಲೆ ಕಳೆದ 10 ವರ್ಷಗಳಲ್ಲಿ ಹತ್ತಾರು ಪಟ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲ, ಪ್ರತಿವರ್ಷ ಇನ್ನೂ ಹೆಚ್ಚಾಗುತ್ತಿದೆ. ಹೀಗಾಗಿ ರೈತರು ಹೈದರಾಬಾದ- ಕರ್ನಾಟಕ ಭಾಗದ ರೈತರಂತೆ ತಮ್ಮ ಜಮೀನನ್ನು ಮಾರಾಟ ಮಾಡಬಾರದು ಎಂದು ಸಚಿವರು ಕಳಕಳ ವ್ಯಕ್ತಪಡಿಸಿದರು.

ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಬಬಲೇಶ್ವರ ಮತಕ್ಷೇತ್ರ, ವಿಜಯಪುರ ಜಿಲ್ಲೆ ಮತ್ತು ರಾಜ್ಯದ ಸೇವೆಯನ್ನು ಪ್ರಾಮಾಣಿಕವಾಗಿ ಹಾಗೂ ಬಹಳ ಅಚ್ಚುಕಟ್ಟಾಗಿ ಮಾಡುತ್ತೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ಶ್ರೀ ಮಠದ ಭಕ್ತನಾಗಿ ತಾವು ವಹಿಸುವ ಎಲ್ಲ ಕೆಲಸಗಳನ್ನು ಹಗಲು ರಾತ್ರಿ ಎನ್ನದೇ ಮಾಡುವುದಾಗಿ ಈ ಎಲ್ಲ ಶ್ರೀಗಳ ಸಮ್ಮುಖದಲ್ಲಿ ಹೇಳಬಯಸುತ್ತೇನೆ. ಬಬಲೇಶ್ವರ ಬೃಹನ್ಮಠಕ್ಕೆ ಒಂದು ಭವ್ಯವಾದ ಇತಿಹಾಸ ಮತ್ತು ಸಂಸ್ಕೃತಿ ಇದೆ. ಶ್ರೀ ಗುರುಪಾದೇಶ್ವ ಮಹಾಸ್ವಾಮಿಗಳು ಇಲ್ಲಿ ನೆಲೆಸಿ ಮಠವನ್ನು ಸ್ಥಾಪಿಸಿ ಜನರನ್ನು ಸನ್ಮಾರ್ಗದ ಕಡೆಗೆ ತೆಗದುಕೊಂಡು ಹೋಗುವ ಧಾರ್ಮಿಕ ಮಹತ್ಕಾರ್ಯ ಮಾಡಿ್ದಾರೆ. ನಂತರ ಶ್ರೀ ಶಾಂತವೀರ ಮಹಾಸ್ವಾಮಿಗಳು ಕೂಡ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಲ್ಲದೇ, ಇವರ ಪ್ರೇರಣೆಯಿಂದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳೂ ಕೂಡ ಜ್ಞಾನದಾಸೋಹ ಮಾಡಿದ್ದಾರೆ. 50 ವರ್ಷಗಳ ಹಿಂದೆ ಪಟ್ಟಾಧಿಕಾರ ವಹಿಸಿಕೊಂಡಿರುವ ಡಾ. ಮಹಾದೇವ ಶಿವಾಚಾರ್ಯರು ಈ ಮಠದ ಭವ್ಯವಾದ ಇತಿಹಾಸ, ಸಂಸ್ಕೃತಿಯನ್ನು ತಮ್ಮ ಅವಧಿಯಲ್ಲಿ ಹೆಮ್ಮರವಾಗಿ ಬೆಳೆಸಿ ಶಾಲೆ, ಕಾಲೇಜು ಪ್ರಾರಂಭಿಸಿ ಎಲ್ಲರಿಗೂ ಧಾರ್ಮಿಕ ಬೋಧನೆ ಮಾಡುವ ಮೂಲಕ ಇನ್ನೂ ಹೆಚ್ಚಿನ ಎತ್ತರಕ್ಕೆ ಒಯ್ದಿದ್ದಾರೆ. ಶ್ರೀಗಳು ಶತಮಾನೋತ್ಸವ ಆಚರಿಸಿಸಲಿ. ಅವರ ಮಾರ್ಗದರ್ಶನದಲ್ಲಿ ನಮಗೆಲ್ಲರಿಗೂ ಇನ್ನೂ ಹೆಚ್ಚಿನ ಸೇವೆ ಮಾಡಲಿ ಮಾರ್ಗದರ್ಶನ ಮಾಡಲಿ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ ಎಂದು ಸಚಿವರು ಹೇಳಿದರು.
ಡಾ. ಮಹಾದೇವ ಶಿವಾಚಾರ್ಯ ಸ್ವಾಮೀಜಿಗಳು ಈ ಹಿಂದೆ ನನಗೆ ಉನ್ನತ ಸ್ಥಾನಕ್ಕೇರುವಿರಿ ಎಂದು ಆಶೀರ್ವಾದ ಮಾಡಿದ್ದರು. ಅದು ನಿಜವಾಗಿದೆ. ತಮ್ಮೆಲ್ಲರ ಆಶೀರ್ವಾದದಿಂದ ನಾವು 2013ರಲ್ಲಿ ಜಲಸಂಪನ್ಮೂಲ ಸಚಿವನಾಗಿ ಜಿಲ್ಲೆಗೆ ಅಂಟಿದ್ದ ಬರಪೀಡಿತ ಜಿಲ್ಲೆ ಹಣೆಪಟ್ಟಿಯನ್ನು ಅಳಸಿ ಹಾಕಿದ್ದೇನೆ. ರೂ. 14000 ಕೋ. ಖರ್ಚು ಮಾಡಿ ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಿಸುವ ಮುಂಚೆಯೇ ಪೂರ್ವ ತಯಾರಿಯಾಗಿ ನೀರಾವರಿಗೆ ಅಗತ್ಯವಾಗಿರುವ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ಇದು ಗುರುಪಾದೇಶ್ವರ, ಶಾಂತವೀರ, ಸ್ವಾಮೀಜಿಗಳ ಆಶೀರ್ವಾದವೇ ಕಾರಣ. ಕುಡಿಯಲು ಅಷ್ಟೇ ಅಲ್ಲ, ರೈತರಿಗೆ ಭೂಮಿಗೆ ಅಂತರ್ಜಲ ಹೆಚ್ಚಿಸುವ ಮೂಲಕ ಯುವಕರು ಕೃಷಿಯ ಕಡೆಗೆ ಆಕರ್ಷಿತರಾಗುವಂತೆ ಮಾಡಿದ್ದೇನೆ. ಮಳೆಯಾಶ್ರಿತ ಮತ್ತು ಬಿತ್ತನೆ ಮಾಡಿದ ಬೀಜದ ಹಣವೂ ವಾಪಸ್ಸಾಗದೇ ಪರದಾಡುತ್ತಿದ್ದವರಿಗೆ ಪರಿಹಾರ ಸಿಕ್ಕಿದೆ. ಬಬಲೇಶ್ವರ ಮತಕ್ಷೇತ್ರ ಮತ್ತು ವಿಜಯಪುರ ಜಿಲ್ಲೆಯ ಜನದ ಮುಂದಿನ ಹತ್ತಾರು ತಲೆಮಾರುಗಳಿಗೆ ನೀರಿನ ಸಮಸ್ಯೆಯಾಗದೇ ಸಂತೃಪ್ತಿಯಿಂದ ಜೀವನ ನಡೆಸುವಂತೆ ಆಗಿದೆ ಎಂದು ಅವರು ಹೇಳಿದರು.

ಈ ಭಾಗದಲ್ಲಿ ಭೂಮಿಯ ಬೆಲೆ ಹೆಚ್ಚಿದೆ. ಯಾರೂ ಭೂಮಿ ಮಾರಿಕೊಳ್ಳಬೇಡಿ. ಹೈದರಾಬಾದ ಕರ್ನಾಟಕದಲ್ಲಿ ರೈತರು ಆಂಧ್ರ ಪ್ರದೇಶದವರಿಗೆ ಭೂಮಿ ಮಾರಿಕೊಂಡಿದ್ದಾರೆ. ಆ ರೀತಿ ಈ ಭಾಗದಲ್ಲಿ ಆಗಬಾರದು ಎಂದು ಅವರು ರೈತರಿಗೆ ಕಿವಿಮಾತು ಹೇಳಿದರು.
ಉಳಿದ ಜಮೀನಿಗೆ ಹೊಲಗಾಲುವೆಗಳ ಮೂಲಕ ನೀರು ಹರಿಸುವ ಕೆಲಸ ಮಾಡುತ್ತೇನೆ. ದೇಶಗಳಿಂದ ಬಂಡವಾಳ ತಂದು ರಾಜ್ಯದ ಅಭಿವೃದ್ಧಿ ಮಾಡಲು ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಬಬಲೇಶ್ವರ ಪಟ್ಟಣದಲ್ಲಿ ಈಗ ಸಬ್ ರಜಿಸ್ಟ್ರಾರ್ ಕಚೇರಿ ಮತ್ತು ಮಿನಿ ವಿಧಾನಸೌಧ ನಿರ್ಮಿಸಲಾಗುತ್ತಿದೆ. ಈ ಪುಣ್ಯಭೂಮಿಯ ಸ್ವಾಮೀಜಿಗಳು ನನ್ನ ಮೂಲಕ ಈ ಕೆಲಸ ಮಾಡಿಸಿದ್ದಾರೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಿ. ಎಸ್. ಪಾಟೀಲ, ಬಿ. ಜಿ. ಬಿರಾದಾರ, ಡಾ. ಎಂ. ಪಿ. ಬಿರಾದಾರ, ಆನಂದ ಬೂದಿಹಾಳ, ಈರಣ್ಣ ಕೋಕರೆ, ಮಲ್ಲು ಮರ್ಯಾಣಿ, ಗುರುಗೊಂಡ ಬಿರಾದಾರ, ಸುಜಾತಾ ಜಂಗಮಶೆಟ್ಟಿ, ಆರ್. ಜಿ. ಯರನಾಳ, ಜಕ್ಕಪ್ಪ ಯಡವೆ, ಡಾ. ಇನಾಮದಾರ ಮುಂತಾದವರು ಉಪಸ್ಥಿತರಿದ್ದರು.

Latest Indian news

Popular Stories